Latest

ಕೋವಿಡ್ ಅಲೆಗಳ ಮಧ್ಯೆ ತತ್ತರಿಸಿ ಹೋದ ಕಾರ್ಮಿಕ

ಇಂದು ಕಾರ್ಮಿಕ ದಿನಾಚರಣೆ

ಪೂರ್ಣಿಮಾ ಹೆಗಡೆ

ಕಳೆದ ಕೆಲ ದಶಕಗಳಿಂದ ಭಾರತ ಆರ್ಥಿಕ ಜಾಗತೀಕರಣದತ್ತ ದಾಪುಗಾಲು ಹಾಕಿದೆ. ಅತೀ ವೇಗವಾಗಿ ಬೆಳೆಯುತ್ತಿರುವ ಉತ್ಪಾದನಾ ಸಾಮರ್ಥ್ಯದಲ್ಲಿ ಪ್ರಪಂಚದ ನಡುವೆ ತಲೆಎತ್ತುವ ಸಾಮರ್ಥ್ಯವನ್ನು ಇಂದು ನಮ್ಮ ದೇಶ ಹೊಂದಿದೆಯೆಂದಾದರೆ ಅದಕ್ಕೆ ಕಾರಣ ಹಗಲಿರುಳೂ ಅರೆಹೊಟ್ಟೆ ಉಂಡು ದುಡಿವ ಕಾರ್ಮಿಕವರ್ಗವೆಂದರೆ ಅದು ಅತಿಶಯೋಕ್ತಿಯಲ್ಲ.

ಭಾರತದಲ್ಲಿ ದಿನವೂ ಸುಮಾರು 480 ಮಿಲಿಯನ್ ಕಾರ್ಮಿಕರು ಕೆಲಸಮಾಡುತ್ತಾರೆ. ಅವರಲ್ಲಿ ಸುಮಾರು 90% ಅಸಂಘಟಿತ ಕಾರ್ಮಿಕ ವಲಯದವರು. ಯಾವದೇ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಅಥವಾ ಕನಿಷ್ಟ ಆರೋಗ್ಯ ಭದ್ರತೆಕೂಡ  ಒದಗಿಸಿಕೊಳ್ಳಲಾಗದ ಅಸಹಾಯಕ ವರ್ಗವದು ಎಂದರೆ ತಪ್ಪಾಗಲಾರದು.

ಪ್ರಚಲಿತ ವಿದ್ಯಮಾನ, ಬೇಜವಾಬ್ದಾರಿಯುತ ಆಡಳಿತ ವ್ಯವಸ್ಥೆ, ಕಾರ್ಮಿಕ ಜೀವನದ ಅಸಹಾಯಕತೆಯಿಂದಾಗಿ ಈ ಅಸಂಘಟಿತ ಕಾರ್ಮಿಕ ವಲಯದ ಪರಿಸ್ಥಿತಿ ತುಂಬಾ ದಯನೀಯವಾಗಿದೆ. ಇವೆಲ್ಲದರ ಮಧ್ಯೆ ಬಂದೆರಗಿದ ಬರಸಿಡಿಲು ಕೋವಿಡ್ -19.

   ಭಾರತ ಕೃಷಿ ಪ್ರಧಾನವಾದ ದೇಶ. ಸಣ್ಣಕೈಗಾರಿಕೆಗಳನ್ನೊಳಗೊಂಡ ಹಳ್ಳಿಗಳದೇಶ.  ನಂತರ ಬೆಳವಣಿಗೆಯಾಗುತ್ತಾ ಬಂದ ಕೈಗಾರಿಕೀಕರಣ ಮತ್ತು ಆಧುನೀಕರಣದ ಸ್ಪರ್ಧೆಯಲ್ಲಿ ದೇಶಾಭಿವೃದ್ಧಿಯೆಂದರೆ ನಗರೀಕರಣ, ನಗರಾಭಿವ್ರದ್ಧಿಯೇ ದೇಶದ ಅಭಿವೃದ್ಧಿ ಎಂಬ ವಿದ್ಯಮಾನ ಬೆಳೆಯುತ್ತಾ ಹೋಯಿತು. ಇದರ ಪರಿಣಾಮ ಎಲ್ಲಾ ಕಾಮಗಾರಿಗಳೂ ನಗರದಲ್ಲಿ ಅಭಿವೃದ್ಧಿಯಾಗತೊಡಗಿದವು. ಕೆಲಸದಿಂದ ಹಿಡಿದು ಎಲ್ಲಾ ಸೌಲಭ್ಯಗಳೂ ನಗರದಲ್ಲಿ  ಮಾತ್ರ ದೊರೆಯತೊಡಗಿದಾಗ ಜನ ತಮ್ಮ ಜೀವನಾನುಕೂಲ ಹುಡುಕುತ್ತಾ ನಗರ ಸೇರತೊಡಗಿದರು. ಇದರ ಪರಿಣಾಮ ಅತೀಯಾಗಿ ಆಗಿದ್ದು ಕೃಷಿ ಮತ್ತು ಸಣ್ಣಕೈಗಾರಿಕೆಗಳ ಮೇಲೆ. ಕಾರ್ಮಿಕರನ್ನೇ ಅವಲಂಬಿಸಿದ್ದ ಇವೆರಡೂ ಕ್ಷೇತ್ರಗಳೂ ಬಡವಾದವು. ಕಾರ್ಮಿಕ ವರ್ಗ ಊರುತೊರೆಯತೊಡಗಿತು. ಹೀಗೆ ಊರುತೊರೆದು ಹೊಟ್ಟೆಪಾಡಿಗಾಗಿ ಬಂದವರಲ್ಲಿ, ದೃಢತೆ, ಆತ್ಮವಿಶ್ವಾಸ, ಸಂಘಟನಾಶಕ್ತಿಗಳ ಕೊರತೆಯುಂಟಾಯಿತು. ಅನಿಶ್ಚಿತತೆಯ ಕತ್ತಿ ಸದಾ ತಲೆಯ ಮೇಲೆ ತೂಗುತ್ತಿರುವುದರಿಂದ, ಬಾಯಿಗೆ ತುತ್ತುಬೇಕಾದರೆ ಬೀಗ ಜಡಿಯುವದು ಅನಿವಾರ್ಯವಾಯಿತು. ಆಯಾ ಋತುಮಾನಕ್ಕೆ ಮಾತ್ರ ದೊರೆಯುವ ಕೆಲಸ, ಮಾಲೀಕ ಮತ್ತು ಕಾರ್ಮಿಕ ಸಂಬಂಧದ ದಾಖಲೆಯ ಕೊರತೆ, ಸಾಮಾಜಿಕ ಅಭದ್ರತೆ, ಔದ್ಯೋಗಿಕ ಒಪ್ಪಂದದ ಕೊರತೆ ಇವೆಲ್ಲವೂ ಅಸಂಘಟಿತ ಕಾರ್ಮಿಕ ವರ್ಗದ ಅಭದ್ರತೆಗೆ ಕಾರಣಗಳು.
ಇಷ್ಟೆಲ್ಲ ಸಾಲದೆಂಬಂತೆ ಯಾರದೋ ಪಾಪಕ್ಕೆ ಬಂದೆರಗಿದ ಕೋವಿಡ್-19 ಮತ್ತು ಅನಿರೀಕ್ಷಿತ ಘೋಷಣೆಗೊಂಡ ಲಾಕ್ಡೌನ್, ಇವೆರಡೂ ಸಹ ಅಸಂಘಟಿತ ಕಾರ್ಮೀಕ ವರ್ಗವನ್ನ ಸರ್ವನಾಶಮಾಡುವದರಲ್ಲಿ ಯಾವ ವ್ಯತ್ಯಾಸವನ್ನೂ ತೋರಿಸಲಿಲ್ಲ. ಭಾರತ ಸರ್ಕಾರ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಮೇರೆ ದೇಶವಾಸಿಗಳನ್ನು ಭಾರತಕ್ಕೆ ಕರೆಸಿಕೊಳ್ಳುವದರಲ್ಲಿ ತೋರಿಸಿದ ಕಾಳಜಿಯನ್ನು, ಇಲ್ಲೇ ದುಡಿದು ಮಡಿಯುವ ಕಾರ್ಮಿಕನನ್ನು ಊರು ಸೇರಿಸುವಲ್ಲಿ ತೋರಿಸದಿರುವದು ವಿಷಾದನೀಯ. ಇಡೀ ಪ್ರಪಂಚ ಕೊರೋನಾ ವಿರುದ್ಧ ಹೋರಾಡುತ್ತಿದ್ದರೆ, ಭಾರತದಲ್ಲಿ ಕಾರ್ಮಿಕ ಊಟಕ್ಕಾಗಿ ಬೇಡುತ್ತಿದ್ದ.
 ಅಲ್ಲಿಗೇ ನಿಲ್ಲದ ಸಂಘರ್ಷ ಕಾರ್ಮಿಕವರ್ಗ ಸಮರೋಪಾದಿಯಲ್ಲಿ ಕಾಲನಡಿಗೆಯಲ್ಲಿಯೇ ಊರುಸೇರಲು ಹೊರಟಾಗ ಮತ್ತೊಮ್ಮೆ ಶುರುವಾಯಿತು. ದಾರಿ ಮಧ್ಯೆ ಸತ್ತವರೆಷ್ಟು ಎನ್ನುವ ಲೆಕ್ಕ ಯಾವ ರಾಜ್ಯಸರ್ಕಾರದ ಕಡತದಲ್ಲಾಗಲೀ, ಯಾವ ಮಾಧ್ಯಮದ ಧ್ವನಿಯಲ್ಲಾಗಲೀ ಇಲ್ಲದಿರುವದು ಖೇದಕರ. ಕೆಲವು ರಾಜ್ಯಗಳಂತೂ ಕೋವಿಡ್ ಎಂಬ ನೆಪದಲ್ಲಿ ಲಾಕ್ಡೌನ್ ಎಂಬ ಹೆಳೆ ಮಾಡಿಕೊಂಡು, ಆರ್ಥಿಕ ನಷ್ಟ ಭರಿಸುವ ಉದ್ದೇಶದಿಂದ ಕಾರ್ಮಿಕ ಸಂರಕ್ಷಣೆಯ ಕತ್ತೇ ಹಿಸುಕಿಬಿಟ್ಟಿವೆ.
ಬಂಡವಾಳಿಗರನ್ನು ಸೆಳೆಯುವದೇ ಗುರಿಯಾಗಿರಿಸಿಕೊಂಡು ಬಿಟ್ಟವು. ” ಹೂಡಿದ ಬಂಡವಾಳದ ಮೊತ್ತವು ದ್ವಿಗುಣಗೊಳ್ಳಬೇಕಾದರೆ, ಯಾವದೇ ಲಾಭದಾಸೆಯಿಲ್ಲದೆ ಹೊಟ್ಟೆಪಾಡಿಗಾಗಿ ದುಡಿಯುವ ಅಸಂಘಟಿತ ಕಾರ್ಮಿಕ ವರ್ಗದ ಸಂರಕ್ಷಣೆ  ಸರ್ಕಾರದ ಮತ್ತು ಮಾಲೀಕನ ಹೊಣೆ ಎನ್ನುವದು ಅರ್ಥವಾಗಿ ಅದು ಕಾರ್ಯರೂಪಕ್ಕೆ ಬರುವಷ್ಟರಲ್ಲಿ, ಈ ಕೋವಿಡ್ ಎನ್ನುವ ಅಲೆಗಳು ಏನನ್ನು ಉಳಿಸುತ್ತದೋ, ಯಾರನ್ನು ಉಳಿಸತ್ತದೋ ಎನ್ನುವದು ದೊಡ್ಡ ????

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button