*ಏಡ್ಸ್ ನಿಯಂತ್ರಣವಾಗದಿರುವುದು ಕಳವಳಕಾರಿ ಸಂಗತಿ: ನ್ಯಾಯಾಧೀಶ ಸಂದೀಪ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇಂದಿನ ಪ್ರಜ್ಞಾವಂತ ನಾಗರಿಕ ಸಮಾಜದಲ್ಲಿ ತಿಳುವಳಿಕೆಯ ಕೊರತೆ ಇಲ್ಲದಿದ್ದರೂ ಬೇಜವಾಬ್ದಾರಿಯಿಂದಾಗಿ ಮಾರಕ ರೋಗ ಏಡ್ಸ್ ನಿಯಂತ್ರಣಕ್ಕೆ ಬಾರದಿರುವುದು ಕಳವಳಕಾರಿ ಸಂಗತಿಯಾಗಿದ್ದು, ಸಾಮುದಾಯಿಕ ಜವಾಬ್ದಾರಿಯ ಮೂಲಕ ಸಮಾಜವನ್ನು ಎಚ್ಚರಿಸುವ ಅಗತ್ಯವಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಸಂದೀಪ ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅಲೈನ್ಸ್ ಕ್ಲಬ್, ಸ್ಮಾರ್ಟ್ ಸಿಟಿ ಕ್ಲಬ್ ಹಾಗೂ ಬಿಮ್ಸ್ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್ ) ಸಭಾಭವನದಲ್ಲಿ ಆಯೋಜಿಸಿದ್ದ “ವಿಶ್ವ ಏಡ್ಸ್ ದಿನಾಚರಣೆ ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸುತ್ತಮುತ್ತಲಿನ ಪರಿಸರ ಕಾಪಾಡಿಕೊಂಡು ಉತ್ತಮ ನೈಸರ್ಗಿಕ ಆಹಾರ ಪದ್ಧತಿ ಅಳವಡಿಸಿಕೊಂಡು ಸಮಾಜ ಪುಷ್ಟೀಕರಿಸಿದ ನೈತಿಕತೆಗೆ ಪೂರಕವಾದ ಚಟುವಟಿಕೆಗಳ ಮೂಲಕ ಸೃಷ್ಟಿಯ ಅಮೂಲ್ಯ ಕೊಡುಗೆಯಾಗಿರುವ ದೇಹವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿಮ್ಸ್ ನಿರ್ದೇಶಕ ಡಾ. ಅಶೋಕ ಕುಮಾರ ಶೆಟ್ಟಿ ಮಾತನಾಡಿ, ಏಡ್ಸ್ ದಂತಹ ಮಾರಕ ರೋಗವನ್ನು ನಿಯಂತ್ರಿಸುವುದಕ್ಕಾಗಿ ವೈದ್ಯಕೀಯ ಕ್ಷೇತ್ರ, ಸರ್ಕಾರ ಮತ್ತು ಸಮಾಜಮುಖಿ ಸಂಘಟನೆಗಳು
ಸಾಕಷ್ಟು ಪ್ರಯತ್ನದಲ್ಲಿ ತೊಡಗಿವೆ. ಅದರಲ್ಲಿ ಯಶಸ್ವಿಯಾಗಬೇಕಾದರೆ ಸಾರ್ವಜನಿಕರು ದುಶ್ಚಟಗಳ ದಾಸರಾಗಿ ಜೀವನ ಹಾಳು ಮಾಡಿಕೊಳ್ಳದೆ ಜವಾಬ್ದಾರಿಯಿಂದ ಜಾಗರೂಕತೆಯಿಂದ ಸುಂದರ ಬದುಕನ್ನು ರೂಪಿಸಿಕೊಳ್ಳಬೇಕೆಂದು ಹೇಳಿದರು.
ಕೆಎಲ್ಇ ಸಂಸ್ಥೆಯ ವೈದ್ಯ ಡಾ. ರಾಜು ನಾಯಕ ಏಡ್ಸ್ ಹಿನ್ನೆಲೆ ಮತ್ತು ಅದನ್ನು ತಡೆಗಟ್ಟುವ ಕುರಿತು ಹಾಗೂ ಬಿಮ್ಸ್ ಔಷಧಿ ವಿಭಾಗದ ಡಾ. ಶೋಭಾ ಕರಿಕಟ್ಟಿ ಅವರು ಏಡ್ಸ್ ರೋಗಿಗಳಿಗೆ ಇರುವ ಕಾನೂನು ಸಹಕಾರದ ಕುರಿತು ಉಪನ್ಯಾಸ ನೀಡಿದರು.
ಅಲೈನ್ಸ್ ಕ್ಲಬ್ ನಿರ್ದೇಶಕ, ನ್ಯಾಯವಾದಿ ದಿನಕರ ಶೆಟ್ಟಿ ಸ್ವಾಗತಿಸಿದರು.ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಸದಸ್ಯ, ನ್ಯಾಯವಾದಿ ರವೀಂದ್ರ ತೋಟಗೇರ ನಿರೂಪಿಸಿ ವಂದಿಸಿದರು.
ಬಿಮ್ಸ್ ವೈದ್ಯಕೀಯ , ಶುಶ್ರೂಷಾ ಕಾಲೇಜು ಪ್ರಾಧ್ಯಾಪಕರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.



