ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಗೆ ದಿನಗಣನೆ ಆರಂಭವಾಗಿದೆ. ಕಾಂಗ್ರೆಸ್ ನಾಯಕರು ಉಪಚುನಾವಣೆಯನ್ನು ಪ್ರತಿಷ್ಠೆಯ ಕಣವನ್ನಾಗಿ ತೆಗೆದುಕೊಂಡಿದ್ದಾರೆ. ಈ ನಡುವೆ ಕಾಂಗ್ರೆಸ್ ನಾಯಕರಿಗೆ ಶಾಕ್ ನೀಡಿರುವ ಲಖನ್ ಜಾರಕಿಹೊಳಿ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆ.
ಬೆಳಗಾವಿ ಉಪಚುನಾವಣೆಗೆ ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿಯವರನ್ನು ಕಣಕ್ಕಿಳಿಸಲಾಗಿದ್ದು , ಮತದಾರರ ಓಲೈಕೆಗಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದ ಕಾಂಗ್ರೆಸ್ ನಾಯಕ ಲಖನ್ ಜಾರಕಿಹೊಳಿ ಇದೀಗ ಬಿಜೆಪಿ ಸೇರ್ಪಡೆಯಾಗಲು ಚಿಂತನೆ ನಡೆಸಿದ್ದಾಗಿ ತಿಳಿಸಿದ್ದಾರೆ.
ಇಂದು ಸಚಿವರಾದ ಜಗದೀಶ್ ಶೆಟ್ಟರ್, ಉಮೇಶ್ ಕತ್ತಿ, ಭೈರತಿ ಬಸವರಾಜ್ ಲಖನ್ ಜಾರಕಿಹೊಳಿ ಭೇಟಿಯಾಗಿ ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದು, ಇದಕ್ಕೆ ಲಖನ್ ಕೂಡ ಸಮ್ಮತಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಲಖನ್ ಜಾರಕಿಹೊಳಿ ಬಿಜೆಪಿಗೆ ಬರುವಂತೆ ದೊಡ್ಡವರೆಲ್ಲ ಆಹ್ವಾನ ನೀಡಿದ್ದಾರೆ. ಸಹೋದರರಾದ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಜೊತೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದಿದ್ದಾರೆ.
ಅಲ್ಲದೇ ಉಪಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸುತ್ತೇನೆ. ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿಗೆ ಟಿಕೆಟ್ ನೀಡಿದ್ದಾರೆ. ಅವರಿಗೆ ಯಾಕೆ ಟಿಕೆಟ್ ಕೊಟ್ಟಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಅವರ ಪರ ಪ್ರಚಾರ ಮಾಡಲು ಮುಜುಗರವಾಗುತ್ತದೆ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ರಮೇಶ ಜಾರಕಿಹೊಳಿ ವಿರುದ್ಧ ಲಖನ್ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದರು. ಸತೀಶ್ ಜಾರಕಿಹೊಳಿ ಲಖನ್ ಪರವಾಗಿ ಕೆಲಸ ಮಾಡಿದ್ದರು.
ರಮೇಶ್ ಜಾರಕಿಹೊಳಿಗೆ ಕೊರೊನಾ; ವೈದ್ಯರು ಹೇಳಿದ್ದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ