ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾಜಿ ಡಿಸಿಎಂ, ಬಿಜೆಪಿ ನಾಯಕ ಲಕ್ಷ್ಮಣ ಸವದಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿದ್ದಾರೆ. ಮುಂದೆ ಅವರು ಕಾಂಗ್ರೆಸ್ ಗೆ ಹೋದರೂ ಹೋಗಬಹುದು ಎಂದು ಎಂಎಲ್ ಸಿ ಲಖನ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿಯ ಗೋಕಾಕ್ ನಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಲಖನ್ ಜಾರಕಿಹೊಳಿ, ಸವದಿ, ಡಿ.ಕೆ.ಶಿವಕುಮಾರ್ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅವರಿಬ್ಬರೂ ಮಾತನಾಡಿರುವ ಮೊಬೈಲ್ ನಂಬರ್ ಕೂಡ ನಮ್ಮ ಬಳಿ ಇದೆ. ಲಕ್ಷ್ಮಣ್ ಸವದಿ ಬೇರೆ ನಂಬರ್ ನಿಂದ ಡಿಕೆಶಿ ಜತೆ ಮಾತುಕತೆ ನಡೆಸಿದ್ದಾರೆ. ಮುಂದೆ ಅವರಿ ಕಾಂಗ್ರೆಸ್ ಗೆ ಹೋದರು ಅಚ್ಚರಿಯಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಸೋಲಲು ಅಥಣಿ ನಾಯಕರೇ ಕಾರಣ. ಮಾಜಿ ಡಿಸಿ ಎಂಗಿದ್ದ ಸವದಿ ಡಿಕೆಶಿ ಜತೆ ಒಳ ಒಪ್ಪಂದ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಯನ್ನೇ ಸೋಲಿಸಿದ್ದಾರೆ. ಪರಿಷತ್ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ಇಬ್ಬರೂ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರು ನನ್ನ ಪರ ಯಾವುದೇ ಕೆಲಸ ಮಾಡಿಲ್ಲ. ನಾನು ಪಕ್ಷೇತರನಾಗಿ ನಿಂತು ಸ್ವತಂತ್ರವಾಗಿ ಆಯ್ಕೆಯಾಗಿದ್ದೇನೆ. ರಮೇಶ್ ಜಾರಕಿಹೊಳಿ ನನ್ನ ಪರ ಕೆಲಸ ಮಾಡಿದ್ದಕ್ಕೆ ಬಿಜೆಪಿ ಅಭ್ಯರ್ಥಿ ಸೋಲು ಎಂಬುದು ಸುಳ್ಳು. ಬಿಜೆಪಿ ಅಭ್ಯರ್ಥಿ ಸೋಲಿಗೆ ಅಥಣಿ ನಾಯಕರು ಕಾರಣ ಎಂದರು.
ಇದೇ ವೇಳೆ ನಾನು ಬಿಜೆಪಿ ಅಥವಾ ಕಾಂಗ್ರೆಸ್ ಯಾವುದೇ ಪಕ್ಷಕ್ಕೂ ಸೇರ್ಪಡೆಯಾಗಲ್ಲ, ಪಕ್ಷೇತರ ನಾಯಕನಾಗಿಯೇ ಕೆಲಸಗಳನ್ನು ಮಾಡುತ್ತೇನೆ. ಯಾವುದೇ ಪಕ್ಷಕ್ಕೆ ಸೇರುವ ಪ್ರಶ್ನೆ ಇಲ್ಲ ಎಂದ ಲಖನ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿಗೆ ಕಾಂಗ್ರೆಸ್ ನ 16 ಅಲ್ಲ, 20 ಶಾಸಕರನ್ನು ಬಿಜೆಪಿಗೆ ಕರೆತರುವ ಶಕ್ತಿಯಿದೆ. ಹೈಕಮಾಂಡ್ ಅವರ ಶಕ್ತಿಯನ್ನು ಬಳಸಿಕೊಳ್ಳಲಿ. ರಮೇಶ್, ಬಾಲಚಂದ್ರ ಜಾರಕಿಹೊಳಿ ಇಬ್ಬರೂ ಯಾವುದೇ ಕೆಲಸ ಮಾಡಬೇಕು ಎಂದು ಪಣತೊಟ್ಟರೆ ಅದನ್ನು ಮಾಡಿಯೇ ಮಾಡ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರೇ ಮೊದಲು ಪಕ್ಷದ ಬಾಗಿಲು ಭದ್ರಪಡಿಸಿಕೊಳ್ಳಿ; ತಿರುಗೇಟು ನೀಡಿದ ಬಿಜೆಪಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ