ಪ್ರಗತಿವಾಹಿನಿ ಸುದ್ದಿ; ಲಖನೌ: ಉತ್ತರ ಪ್ರದೇಶದ ಲಖೀಂಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪೊಲೀಸರ ವಾಹನಕ್ಕೆ ಬೆಂಕಿ ಹಚ್ಚಿ ಪ್ರತಿಭಟನಾಕರರ ಗುಂಪು ಆಕ್ರೋಶ ವ್ಯಕ್ತಪಡಿಸಿದೆ.
ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಕಾರು ಹರಿಸಿದ ಪರಿಣಾಮ ಇಬ್ಬರು ರೈತರು ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ಬೆನ್ನಲ್ಲೇ ಲಖಿಂಪುರದಲ್ಲಿ ಹಿಂಸಾಚಾರ ತೀವ್ರಗೊಂಡಿದ್ದು, ನಾಲ್ವರು ರೈತರು, ಓರ್ವ ಪತ್ರಕರ್ತ ಸೇರಿ 8 ಜನರು ಹಿಂಸಾಚಾರದಲ್ಲಿ ಬಲಿಯಾಗಿದ್ದರು.
ಈ ನಡುವೆ ರೈತರ ಸಾವಿಗೆ ಕಾರಣರಾದ ಆಶಿಶ್ ಮಿಶ್ರಾ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ. ಮತ್ತೊಂದೆಡೆ ಲಖಿಂಪುರದಲ್ಲಿ ರೈತರು ಪ್ರತಿಭಟನೆ ತೀವ್ರಗೊಳಿಸಿದ್ದು, ಉದ್ವಿಗ್ನರ ಗುಂಪೊಂದು ಇಂದು ಬೆಳಿಗ್ಗೆ ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದೆ.
ಲಖಿಂಪುರ ರೈತರ ಮೇಲೆ ಕಾರು ಹರಿದ ಪ್ರಕರಣ ಖಂಡಿಸಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ತಮ್ಮ ಮನೆ ಮುಂದೆ ಪ್ರತಿಭಟನೆ ನಡೆಸಿದ್ದರು. ರೈತರ ಮೇಲಿನ ಬಿಜೆಪಿ ಸರ್ಕಾರ ನಡೆಸಿದಷ್ಟು ದೌರ್ಜನ್ಯವನ್ನು ಬ್ರಿಟಿಷರು ಕೂಡ ನಮ್ಮ ದೇಶದವರ ಮೇಲೆ ನಡೆಸಿರಲಿಲ್ಲ ಎಂದು ಕಿಡಿಕಾರಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದಂತೆ ಅಖಿಲೇಶ್ ಯಾದವ್ ಅವರನ್ನು ಗೃಹ ಬಂಧನದಲ್ಲಿ ಇರಿಸಲಾಗಿದ್ದು, ಅವರ ಮನೆ ಸುತ್ತ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಇನ್ನೊಂದೆಡೆ ಅಖಿಲೇಶ್ ಯಾದವ್ ಮನೆ ಮುಂದೆ ಬೆಂಬಲಿಗರು ಹಾಗೂ ಸಮಾಜವಾದಿ ಪಕ್ಷದ ಕಾರ್ಯಕರ್ತರು ಧರಣಿ ನಡೆಸಿದ್ದಾರೆ.
ಲಖಿಂಪುರದಾದ್ಯಂತ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಇಂದೂ ಕೂಡ ಗಲಭೆ ಮುಂದುವರೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ