*ರಮೇಶ್ ಜಾರಕಿಹೊಳಿಗೆ ಗೌರವ ಪದದ ಅರ್ಥವೇ ಗೊತ್ತಿಲ್ಲ: ಸೂಕ್ಷ್ಮತೆಯ ಪಾಠ ಮಾಡಿದ ಲಕ್ಷ್ಮಣ ಸವದಿ*

ಮೆಂಟಲ್ ತರ ಮಾತನಾಡುವ ರಮೇಶ್ ಗೆ ಜನರು ತಕ್ಕ ಉತ್ತರ ಕೊಡುತ್ತಾರೆ: ಮಾಜಿ ಡಿಸಿಎಂ
ಪ್ರಗತಿವಾಹಿನಿ ಸುದ್ದಿ: ಗೋಕಾಕ್ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹಲವು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗಾಗಲೇ ರಮೇಶ್ ಜಾರಕಿಹೊಳಿ ಅವರನ್ನು ಅಥಣಿ ತಾಲೂಕಿನ ಜನ ತಿರಸ್ಕರಿಸಿದ್ದಾರೆ. ಆದರೂ ರಮೇಶ್ ಜಾರಕಿಹೊಳಿಗೆ ತಿರಸ್ಕಾರದ ಅರಿವು ಆಗಿಲ್ಲ ಎಂದು ಅಥಣಿ ಕಾಂಗ್ರೆಸ್ ಶಾಸಕ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿಗೆ ಮಾನ, ಮರ್ಯಾದೆ ಎಂಬುದು ಇದ್ದರೆ ಇನ್ಮುಂದೆ ಅಥಣಿ ತಾಲೂಕಿಗೆ ಕಾಲು ಇಡಬಾರದು. ಅಷ್ಟು ದೊಡ್ಡ ಮಟ್ಟದಲ್ಲಿ ತಾಲೂಕಿನ ಜನರು ರಮೇಶ್ ಜಾರಕಿಹೊಳಿಗೆ 2023ರಲ್ಲಿಯೂ ಅವಮಾನ ಮಾಡಿದ್ದಾರೆ. ಜಿಲ್ಲಾ ಬ್ಯಾಂಕ್ ಚುನಾವಣೆಯಲ್ಲಿಯೂ ಮಾಡಿದ್ದಾರೆ. ಯಾರು ಜಾಣರಿರುತ್ತಾರೆ, ಯಾರು ಬುದ್ಧಿಜೀವಿಗಳಿರುತ್ತಾರೆ ಅಂತವರಿಗೆ ಈ ಎಲ್ಲಾ ಸೂಕ್ಷ್ಮತೆಗಳು ಅರ್ಥವಾಗುತ್ತವೆ. ಅಂತಹ ಸೂಕ್ಷ್ಮತೆ ಇರದ ಜನರಿಗೆ ಅರಿವು ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಆತನಿಗೆ ತನ್ನ ಗೌರವದ ಬಗ್ಗೆಯೂ ಗೊತ್ತಿಲ್ಲ, ಬೇರೆಯವರ ಗೌರವದ ಬಗ್ಗೆಯೂ ಗೊತ್ತಿಲ್ಲ. ಆತನಿಗೆ ‘ಗೌರವ’ ಎಂಬ ಶಬ್ಧದ ಅರ್ಥವೇ ಗೊತ್ತಿಲ್ಲ. ಮನುಷ್ಯನಿಗೆ ‘ಸಂಸ್ಕಾರ’ ಎಂಬುದು ಮುಖ್ಯ. ಆ ಸಂಸ್ಕಾರವೇ ಇಲ್ಲದ ವ್ಯಕ್ತಿ ಇಂತಹ ಮಾತುಗಳನ್ನು ಆಡುತ್ತಾನೆ. ನನಗೆ ನನ್ನ ತಂದೆ-ತಾಯಿ ಸಂಸ್ಕಾರವನ್ನು ಕಲಿಸಿದ್ದಾರೆ. ಆಧ್ಯಾತ್ಮದ ಹಿನ್ನೆಲೆಯುಳ್ಳ ಮನೆತನ ನಮ್ಮದು. ಹಾಗಾಗಿ ನಾನು ಮಾತನಾಡುವಾಗ ಪ್ರತಿ ಶಬ್ಧದ ಬಗ್ಗೆಯೂ ಆಲೋಚನೆ ಮಾಡಿ ಮಾತನಾಡುತ್ತೇನೆ. ನನಗೆ ನನ್ನ ಗುರುಹಿರಿಯರು, ತಂದೆ-ತಾಯಿ ಸಂಸ್ಕಾರ ಕೊಟ್ಟಿದ್ದಾರೆ. ಹಾಗಾಗಿ ನಾನು ಮೆಂಟಲ್ ತರ ಮಾತನಾಡಲು ಹೋಗಲ್ಲ ಎಂದಿದ್ದಾರೆ.
ನನ್ನ ಬಳಿಯೂ ಸಾಕಷ್ಟು ಶಬ್ಧಕೋಶಗಳಿವೆ. ಆದರೆ ನಾನು ಆತನಂತೆ ಮಾತನಾಡಲ್ಲ, ಅವರ ಹಾಗೆ ನಾನೂ ಮಾತನಾಡಿದರೆ ನನ್ನನ್ನೂ ಜನ ಮೆಂಟಲ್ ಎಂದು ಕರೆಯುತ್ತಾರೆ. ರಮೇಶ್ ಜಾರಕಿಹೊಳಿಗೆ ಈಗಾಗಲೇ ತಾಲೂಕು ಜನರು ಉತ್ತರ ಕೊಟ್ಟಿದ್ದಾರೆ. 2023ರಲ್ಲೂ ಉತ್ತರ ಕೊಟ್ಟಿದ್ದಾರೆ. ಈಗಲೂ ಕೊಟ್ಟಿದ್ದಾರೆ. ಕೃಷ್ಣ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿಯೂ ಉತ್ತರ ಕೊಡುತ್ತಾರೆ. ಮುಂದೆ 2028ರ ಚುನಾವಣೆಯಲ್ಲಿಯೂ ಉತ್ತರ ಕೊಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಅಥಣಿ ಜನ ಬಹಳ ಸೂಕ್ಷ್ಮಮತಿಗಳು, ಅತ್ಯಂತ ಬುದ್ಧಿಜೀವಿಗಳು. ಯಾರಿಂದಲೋ ಬುದ್ಧಿಕಲಿಬೇಕು ಎಂಬ ಅವಶ್ಯಕತೆ ತಾಲೂಕಿನ ಜನರಿಗೆ ಇಲ್ಲ. ಇದು ಶಿವಯೋಗಿಗಳ ನಾಡು, ಪುಣ್ಯ ಭೂಮಿ. ಪುಣ್ಯಭೂಮಿಯಲ್ಲಿ ಜನಿಸಿರುವ ಜನರು ಬಹಳ ಸೂಕ್ಷ್ಮಮತಿಗಳಿರುವುದರಿಂದ ಯಾರಿಗೆ ಯಾವ ಕಾಲಕ್ಕೆ ಹೇಗೆ ಉತ್ತರ ಕೊಡಬೇಕೋ ಹಾಗೆ ಅಥಣಿ ತಾಲೂಕಿನ ಜನಕೊಡುತ್ತಾರೆ ಎಂದು ತಿಳಿಸಿದ್ದಾರೆ.