*ಅವರ ಬಗ್ಗೆ ಮಾತನಾಡಲ್ಲ, ನಾವು ತವರು ಮನೆ ಬಿಟ್ಟು ಗಂಡನ ಮನೆಗೆ ಬಂದಿದ್ದೇವೆ ಎಂದ ಲಕ್ಷ್ಮಣ ಸವದಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭಾ ಚುನಾವಣೆ ಅಖಾಡ ರಂಗೇರಿದ್ದು, ಟಿಕೆಟ್ ಕೈತಪ್ಪಿದ ಬಳಿಕ ಘಟಾನುಘಟಿ ನಾಯಕರು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯಲ್ಲಿ ಟಿಕೆಟ್ ಕೈ ತಪ್ಪಲು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಕಾರಣ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಶೆಟ್ಟರ್ ಹೇಳಿಕೆ ಬಗ್ಗೆ ಮಾತನಾಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಬಿ.ಎಲ್.ಸಂತೋಷ್ ಬಗ್ಗೆ ನಾನು ಮಾತನಾಡಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಲಕ್ಷ್ಮಣ ಸವದಿ, ಬಿ.ಎಲ್.ಸಂತೋಷ್ ಬಗ್ಗೆ ನಾನು ಯಾವುದೇ ಟೀಕೆ, ಟಿಪ್ಪಣಿ ಮಾಡಲ್ಲ, ಅದು ಇಷ್ಟವೂ ಇಲ್ಲ. ಬಿಜೆಪಿಯಲ್ಲಿ 20 ವರ್ಷಗಳ ಕಾಲ ನನ್ನ ಜೊತೆಗಿದ್ದ ಹಲವರು ಕಾಂಗ್ರೆಸ್ ಸೇರಿದ್ದಾರೆ. ನನ್ನ ಜೊತೆ ಬಂದ ಅನೇಕ ಹಿರಿಯರು, ರೈತರು ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನಾನು ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.
ಇನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆತನ ಜನಸಂಘದಿಂದ ಬಿಜೆಪಿಯವರೆಗೆ ಕೆಲಸ ಮಾಡಿದ ಮನೆತನ. ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದರಲ್ಲಿ ಅವರದ್ದೇ ಆದ ಸೇವೆ, ಪಾತ್ರ ಮಹತ್ವದ್ದಾಗಿದೆ. ಮನೆ ಬಿಟ್ಟು ಹೊರಗೆ ಹೋಗುವಾಗ ಭಾವುಕರಾಗುವುದು ಸಹಜ. ಓರ್ವ ಹೆಣ್ಣು ಮಗಳನ್ನು 20-25 ವರ್ಷಗಳ ಕಾಲ ತಂದೆ-ತಾಯಿ ಬೆಳೆಸುತ್ತಾರೆ. ಮದುವೆಯಾಗುವಾಗ ಗಂಡನ ಮನೆಗೆ ಹೋಗುವಾಗ ಆಕೆಗೆ ಆ ಮನೆ ಹೇಗಿರುತ್ತೋ ಎಂಬ ಆತಂಕ, ದು:ಖ ಆಗುತ್ತದೆ. ಹಾಗೇ ನಾವು ಇಂದು ತವರು ಮನೆ ಬಿಟ್ಟು ಗಂಡನ ಮನೆಗೆ ಬಂದಿದ್ದೇವೆ. ಗಂಡನ ಮನೆಯವರು ಪ್ರೀತಿಯಿಂದ ಕಾಣುತ್ತಿದ್ದಾರೆ. ಇನ್ಮುಂದೆ ಇದೇ ನಮ್ಮ ಮನೆ ಎಂದು ಮುಂದುವರೆಯುತ್ತೇವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ