
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ವೈಶಿಷ್ಠ್ಯಪೂರ್ಣವಾಗಿ ಮಹಿಳಾ ದಿನಾಚರಣೆ ನಡೆಯಿತು. ಕ್ಷೇತ್ರದ ಮೊದಲ ಮಹಿಳಾ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಜನತೆಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಸಮರ್ಪಿಸುವ ಮೂಲಕ ಮಹಿಳಾ ದಿನಕ್ಕೊಂದು ಅರ್ಥ ನೀಡಿದರು.




50 ಲಕ್ಷ ರೂ.ಗಳ ವೆಚ್ಚದಲ್ಲಿ ಸುಮಾರು ಒಂದು ಕಿಲೊಮೀಟರ್ ಕಾಂಕ್ರೀಟ್ ರಸ್ತೆಯ ನಿರ್ಮಾಣ ಮತ್ತು 43 ಲಕ್ಷ ರೂ.,ಗಳ ವೆಚ್ಚದಲ್ಲಿ ಶಾಹು ನಗರ ದಿಂದ ಎಮ್ ಆಯ್ ಟ್ಯಾಂಕ್ ವರೆಗೆ ರಸ್ತೆಯ ಡಾಂಬರೀಕರಣದ ಕಾಮಗಾರಿಗೆ ಪೂಜೆ ಸಲ್ಲಿಸಲಾಯಿತು.
ಗ್ರಾಮೀಣ ಕ್ಷೇತ್ರ ಅತ್ಯಂತ ವಿಶಿಷ್ಟವಾಗಿದ್ದು, ಇಲ್ಲಿಯ ಜನರು ಬಹಳ ಮೃಧು ಸ್ವಭಾವದವರು. ಆದರೆ ಈವರೆಗೆ ಜನರ ಮುಗ್ದತೆಯನ್ನು ಬಳಸಿಕೊಂಡು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳಲಾಗಿತ್ತು. ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯಲಿಲ್ಲ. ನಾನು ಶಾಸಕಿಯಾದ ನಂತರ ಕ್ಷೇತ್ರವನ್ನು ಮಾದರಿಯಾಗಿಸುವ ಗುರಿ ಇಟ್ಟುಕೊಂಡು ನಿರಂತರವಾಗಿ ಅಭಿವೃದ್ಧಿ ಯೋಜನೆಗಳನ್ನು ತರುತ್ತಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು.
ಕ್ಷೇತ್ರದ ಜನರ ಆಶಿರ್ವಾದ, ಪ್ರೀತಿ ಇದ್ದರೆ ಮುಂದಿನ ದಿನಗಳಲ್ಲಿ ಹಲವಾರು ಬೃಹತ್ ಯೋಜನೆಗಳನ್ನು ತರುವ ಕನಸು ಹೊತ್ತಿದ್ದೇನೆ. ಇದರಿಂದ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಇಲ್ಲಿನ ಯುವಕರಿಗೆ ಉದ್ಯೋಗ ದೊರೆಯಲಿದೆ. ಪ್ರವಾಸೋದ್ಯಮ ದೃಷ್ಟಿಯಿಂದಲೂ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಸಂಪೂರ್ಣ ನೀರಾವರಿಗೆ ಒಳಪಡಿಸಲಾಗುವುದು. ಜಾತಿ, ಭಾಷೆ, ರಾಜಕೀಯವನ್ನು ಬದಿಗಿಟ್ಟು ನಿಮ್ಮ ಸೇವೆ ಮಾಡಲು ಬದ್ಧನಾಗಿದ್ದೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.