ಜನಸಾಗರೋಪಾದಿಯ ಅದ್ಧೂರಿ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್: ಸತೀಶ್ ಜಾರಕಿಹೊಳಿ ಸಾಥ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಿಪಿಎಡ್ ಮೈದಾನದಿಂದ ಚನ್ನಮ್ಮ ವೃತ್ತದವರೆಗೆ ಎಲ್ಲಿ ನೋಡಿದರಲ್ಲಿ ಜನವೋ ಜನ. ರಾರಾಜಿಸಿದ ಕಾಂಗ್ರೆಸ್ ಭಾವುಟ. ಸಾಗರೋಪಾದಿಯಲ್ಲಿ ಸೇರಿದ್ದ ಜನರೊಂದಿಗೆ ಅದ್ಧೂರಿ ಮೆರವಣಿಗೆಯಲ್ಲಿ ತೆರಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಇಂದು ನಾಮಪತ್ರ ಸಲ್ಲಿಸಿದರು.

ಹಿಂಡಲಗಾ ಗಣಪತಿ ಮಂದಿರದಲ್ಲಿ ಪೂಜೆ ಸಲ್ಲಿಸಿದ ನಂತರ ಅಲ್ಲಿಂದಲೇ ಮೆರವಣಿಗೆ ಆರಂಭವಾಯಿತು. ಸಿಪಿಎಡ್ ಮೈದಾನಕ್ಕೆ ಆಗಮಿಸುತ್ತಿದ್ದಂತೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬೆಂಬಲಿಗರು ಸೇರಿಕೊಂಡರು. ಅಲ್ಲಿಂದ ಅಪಾರ ಸಂಖ್ಯೆಯ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರನ್ನೊಳಗೊಂಡು ಮೆರವಣಿಗೆ ನಡೆಸಲಾಯಿತು. ಅಲಂಕೃತ ತೆರೆದ ವಾಹನದಲ್ಲಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ಇತರ ಗಣ್ಯರು ಇದ್ದರು. ಅಭಿಮಾನಿಗಳು, ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಜಯಕಾರ ಮೊಳಗಿದರು. ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಅವರ ಸಾಧನೆಯನ್ನು ಪ್ರಚುರಪಡಿಸುವ ಹಾಡುಗಳು ಮೊಳಗಿದವು. ಮೆರವಣಿಗೆಯುದ್ದಕ್ಕೂ ಕಾಂಗ್ರೆಸ್ ಪಕ್ಷದ ಹಾಗೂ ಲಕ್ಷ್ಮೀ ಹೆಬ್ಬಾಳಕರ ಅವರ ಭಾವಚಿತ್ರವಿರುವ ಫೋಟೊಗಳು ರಾರಾಜಿಸಿದವು. ಢೋಲು, ವಾದ್ಯಗಳ ಮೂಲಕ ಮೆರವಣಿಗೆಗೆ ಮೆರುಗು ತಂದರು.

ಮೆರವಣಿಗೆ ಚನ್ನಮ್ಮ ವೃತ್ತದ ಬಳಿ ಬರುತ್ತಿದ್ದಂತೆ, 40 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ, “ಪ್ರತಿಪಕ್ಷದ ಶಾಸಕಿಯಾದರೂ ಅಲ್ಪಾವಧಿಯಲ್ಲೇಅಪಾರ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡಿ ತೋರಿಸಿದ್ದೇನೆ. ಕೊರೋನಾ,ಪ್ರವಾಹಗಳಿಂದಾಗಿ ಒಂದಿಷ್ಟು ಸಮಯ ನಷ್ಟವಾದರೂ ಸಿಕ್ಕಿದ ಸಮಯಾವಕಾಶವನ್ನು ಸದುಪಯೋಗಪಡಿಸಿಕೊಂಡು ಹಗಲು- ರಾತ್ರಿ ಕೆಲಸ ಮಾಡಿ ಕೊಟ್ಟ ವಚನವನ್ನು ಪೂರೈಸಿದ್ದೇನೆ. ಎಲ್ಲ ಜಾತಿ, ಧರ್ಮದ ಜನರಿಗೂ ಮಂದಿರ, ಸಮುದಾಯಭವನಗಳನ್ನು ನಿರ್ಮಿಸಿಕೊಟ್ಟಿದ್ದೇನೆ. ರಾಜಹಂಸಗಡದಲ್ಲಿ ಭವ್ಯ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಸ್ಥಾಪಿಸಿದ್ದೇನೆ. ಜನ ಕಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಬರುವ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ನಿಮ್ಮ ಮನೆಮಗಳ ಕೊರಳಿಗೆ ವಿಜಯದ ಮಾಲೆ ಹಾಕಬೇಕು,’’ ಎಂದು ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ನಿವೇದನೆ ಮಾಡಿದರು.

ಇದಕ್ಕೂ ಮುನ್ನ ಲಕ್ಷ್ಮೀ ಹೆಬ್ಬಾಳಕರ್ ಅವರ ತಾಯಿ ಗಿರಿಜಾ ಬಸವರಾಜ ಹಟ್ಟಿಹೊಳಿ ಹಾಗೂ ಸಹೋದರಿ ಸೇರಿ, ಸಂಸ್ಕೃತಿ, ಸಂಪ್ರದಾಯದಂತೆ ಗೋಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು.

ಅಲ್ಲಿಂದ ಸುಳೇಬಾವಿಗೆ ತೆರಳಿದ ಲಕ್ಷ್ಮೀ ಹೆಬ್ಬಾಳಕರ ಈ ಭಾಗದ ಜಾಗೃತ ಶಕ್ತಿ ಶ್ರೀ ಮಹಾಲಕ್ಷ್ಮೀ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಲಕ್ಷ್ಮೀ ಹೆಬ್ಬಾಳಕರ ಅವರ ಸಹೋದರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಪುತ್ರ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ ಸೇರಿದಂತೆ ಕುಟುಂಬದ ಸದಸ್ಯರು, ಹಿತೈಷಿಗಳು ಹಾಗೂ ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ನಂತರ ಹಿಂಡಲಗಾದ ಶ್ರೀ ಮಹಾಗಣಪತಿ ದೇಗುಲಕ್ಕೆ ಭೇಟಿ ನೀಡಿ ಅಲ್ಲಿಯೂ ವಿಶೇಷ ಪೂಜೆ ನೆರವೇರಿಸಿ ಕ್ಷೇತ್ರ, ಕ್ಷೇತ್ರದ ಜನತೆಯ ಸರ್ವಾಂಗೀಣ ಅಭ್ಯುದಯಕ್ಕಾಗಿ ಪ್ರಾರ್ಥಿಸಿದರು. ನಂತರ ಅಲ್ಲಿಂದಲೇ ಸಹಸ್ರ ಸಹಸ್ರ ಸಂಖ್ಯೆ ಬೆಂಬಲಿಗರೊಂದಿಗೆ ಮೆರವಣಿಗೆ ಆರಂಭವಾಯಿತು.

ಅಲ್ಲಿಂದ ಚುನಾವಣಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲೇ ತೆರಳಿದ ಲಕ್ಷ್ಮೀ ಹೆಬ್ಬಾಳಕರ, ಚುನಾವಣಾಧಿಕಾರಿಗೆ ಎರಡು ಸೆಟ್ ಗಳಲ್ಲಿ ನಾಮಪತ್ರ ಸಲ್ಲಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಹಿರೇಬಾಗೇವಾಡಿಯ ಅಶ್ರಫ್ ಪೀರ್ ದರ್ಗಾ ಅಜ್ಜನವರು, ಯುವರಾಜ ಕದಂ, ಸಿ.ಸಿ.ಪಾಟೀಲ, ಡಿಕೋಳ್ಕರ್, ಶಂಕರಗೌಡ ಪಾಟೀಲ, ಬಸವರಾಜ ಮ್ಯಾಗೋಟಿ, ಸುರೇಶ ಇಟಗಿ, ಅಡಿವೇಶ ಇಟಗಿ, ಮಹಾಂತೇಶ ಮತ್ತಿಕೊಪ್ಪ, ಬಾಗಣ್ಣ ನರೋಟಿ, ಸಿದ್ದಪ್ಪ ಕಾಂಬಳೆ, ಮನೋಹರ ಬಾಂಡಗಿ, ಸುರೇಶ ಗೋವಣ್ಣವರ್, ಜಯರಾಂ ಪಾಟೀಲ, ಅರವಿಂದ ಪಾಟೀಲ, ಗಂಗಣ್ಣ ಕಲ್ಲೂರ, ಅಶೋಕ ತೋರ್ಲಿ, ಅಷ್ಪಾಕ ತಹಸಿಲ್ದಾರ, ಅಪ್ಪಾ ಬಾಗವಾನ, ಬಸವಂತ ಮಾಯಿಕ, ಮಹೇಶ ಸುಗನೆನ್ನವರ್, ಮಹಾವೀರ ಪಾಟೀಲ, ಬಸವರಾ ತಳವಾರ ಸೇರಿದಂತೆ ಹಲವಾರು ಗಣ್ಯರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ