*ಜೈನ ಧರ್ಮದ ಆಚರಣೆಗಳು ಸಮಾಜಕ್ಕೆ ಮಾದರಿಯಾಗಿವೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಅಂಹಿಸಾ ಪರಮೋ ಧರ್ಮಃ ಎನ್ನುವ ನಂಬಿಕೆಯನ್ನಿಟ್ಟುಕೊಂಡಿರುವ ಜೈನ ಧರ್ಮದ ಆಚರಣೆಗಳು ವಿಶಿಷ್ಟವಾಗಿದ್ದು, ಸಮಾಜಕ್ಕೆ ಮಾದರಿಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಹಲಗಾ ಗ್ರಾಮದ ಜೈನ ಬಸದಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪರ್ಯುಷಣ ಪರ್ವ ದಶಲಕ್ಷಣ ನೋಂಪಿ ಮತ್ತು ಪಂಚಮೇರು ನೋಂಪಿ ಮತ್ತು ಆಕಾಶ ಪಂಚಮಿ ನೋಂಪಿ ಮತ್ತು ಪುಷ್ಪಾಂಜಲಿ ನೋಂಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಧರ್ಮ, ಸಂಪ್ರದಾಯ, ಧಾರ್ಮಿಕ ಮುಖಂಡರು, ಧಾರ್ಮಿಕ ಆಚರಣೆಗಳಿಂದಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ. ನಮ್ಮ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲ ಮುನ್ನಡೆಯುವುದರಿಂದ ಮುಂದಿನ ಪೀಳಿಗೆ ಸಹ ನೆಮ್ಮದಿಯ ಬದುಕು ಕಾಣಲು ಸಾಧ್ಯ. ನಿಮ್ಮೆಲ್ಲರ ಸಹಕಾರ, ಆಶಿರ್ವಾದದಿಂದ ನಾನು ರಾಜ್ಯದ ಮಂತ್ರಿಯಾಗಿ ಸೇವೆ ಸಲ್ಲಿಸಲು ಅವಕಾಶವಾಗಿದೆ. ಮುಂದಿನ ದಿನಗಳಲ್ಲಿ ಸಹ ಎಲ್ಲರೂ ಪರಸ್ಪರ ಸಹಕಾರದಿಂದ ಮುನ್ನಡೆಯೋಣ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಈ ಸಂದರ್ಭದಲ್ಲಿ ಮಹಾವೀರ ಪಾಟೀಲ, ಸಂತೋಷ ಕೆಂಗಲಗೌಡ, ಸುಕುಮಾರ ಹುಡೇದ್, ಬಾಬು ದೇಸಾಯಿ, ಧನುಕುಮಾರ್ ದೇಸಾಯಿ, ಸಂತೋಷ್ ಪಾಟೀಲ, ಶ್ರೀಪಾಲ್ ಕೆಂಗಲಗೌಡ, ಶಾಂತು ಬೆಲ್ಲದ್, ಮಹಾವೀರ ಬೆಲ್ಲದ್, ಭರತೇಶ್ ಬೆಲ್ಲದ್, ಮಹಾವೀರ ಅಲಾರವಾಡ್, ಅಣ್ಣಾಸಾಹೇಬ್ ದೇಸಾಯಿ, ಜೈನ ಸಮಾಜ ಮತ್ತು ಶ್ರೀ 1008 ಪಾರ್ಶ್ವನಾಥ ಕಮಿಟಿಯ ಸದಸ್ಯರು ಇದ್ದರು.