*ಪಕ್ಷ, ಭಾಷೆ ನೋಡದೆ ಎಲ್ಲರ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ”: ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: “ನಾನು ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾವ ಪಕ್ಷದವರು, ಯಾವ ಭಾಷೆಯವರು ಎಂಬುದನ್ನು ಎಂದಿಗೂ ನೋಡಿಲ್ಲ. ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ, ಕ್ಷೇತ್ರದ ಪ್ರತಿಯೊಂದು ಭಾಗಕ್ಕೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆ,” ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕರಡಿಗುದ್ದಿ ಗ್ರಾಮದಲ್ಲಿ ಸುಮಾರು ₹2.75 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿ ಅವರು ಮಾತನಾಡಿದರು.

“ಗ್ರಾಮೀಣ ಕ್ಷೇತ್ರದಲ್ಲಿರುವ ಜನರಿಗೂ ನಗರದ ಬಡಾವಣೆಗಳಲ್ಲಿ ದೊರೆಯುವ ರೀತಿಯಲ್ಲೇ ಉತ್ತಮ ಮೂಲಭೂತ ಸೌಕರ್ಯಗಳು ದೊರೆಯಬೇಕು. ಈ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ರಸ್ತೆ, ಚರಂಡಿ ಸೇರಿದಂತೆ ಅಗತ್ಯ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದ್ದೇನೆ. ಕ್ಷೇತ್ರದ ಯಾವುದೇ ಭಾಗ ಅಭಿವೃದ್ಧಿಯಿಂದ ವಂಚಿತವಾಗಬಾರದು ಎಂಬುದು ನನ್ನ ಆಶಯ,” ಎಂದು ಅವರು ಹೇಳಿದರು.
ಜನರ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ರಸ್ತೆ ಮತ್ತು ಚರಂಡಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಗ್ರಾಮಸ್ಥರಿಗೆ ಸಂಚಾರ ಹಾಗೂ ಮಳೆ ನೀರು ಹರಿದು ಹೋಗುವ ಸಮಸ್ಯೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಯುವರಾಜ ಕದಂ, ನಾಗೇಶ್ ದೇಸಾಯಿ, ಸಿದ್ದಪ್ಪ ಚೌಗುಲಾ, ಸದಾಶಿವ ಮೂಖನವರ, ಉಳವಪ್ಪ ಮಲನ್ನವರ, ಬಸವರಾಜ ರಾಚನ್ನವರ, ಮಹಾಂತೇಶ್ ರಾಜನ್ನವರ, ಹಾಲಪ್ಪ ನೇಸರಗಿ, ಅಶೋಕ ಮೂಖನವರ, ಗಿರಿಜಾ ಪಾಟೀಲ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.



