Kannada NewsKarnataka NewsLatest

ಗೃಹಲಕ್ಷ್ಮೀ ಕೆಣಕಿದ ಸಿದ್ದು ಸವದಿಗೆ ಲಕ್ಷ್ಮೀ ಹೆಬ್ಬಾಳಕರ್ ಖಡಕ್ ಉತ್ತರ

 *ಗೃಹಲಕ್ಷ್ಮಿ ಯೋಜನೆ ಅತ್ಯಂತ ಯಶಸ್ವಿ : ಲಕ್ಷ್ಮೀ ಹೆಬ್ಬಾಳಕರ್** 

 ಪ್ರಗತಿವಾಹಿನಿ ಸುದ್ದಿ, *ಬೆಂಗಳೂರು* :  ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಸುಮಾರು 1.18 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಮಾಡುತ್ತಿದ್ದೇವೆ. ಗೃಹಲಕ್ಷ್ಮಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. 

ಬಜೆಟ್ ಮೇಲಿನ ಚರ್ಚೆ ವೇಳೆ ಗುರುವಾರ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಗೃಹಲಕ್ಷ್ಮಿ ಯೋಜನೆ ಅರ್ಹರಿಗೆ ತಲುಪುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಯೋಜನೆಗೆ 1.28 ಕೋಟಿ ಮಹಿಳೆಯರು ಅರ್ಹರಿದ್ದು, ಈ ಪೈಕಿ ಯೋಜನೆಗೆ ನೋಂದಣಿಯಾಗಿರುವ 1.18 ಕೋಟಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ. ಬಜೆಟ್‌ನಲ್ಲಿ ವಾರ್ಷಿಕ 34 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದರು. 

ಇದೊಂದು ದೊಡ್ಡ ಯೋಜನೆ. ಗೃಹಲಕ್ಷ್ಮಿ ಬಂದ ಬಳಿಕ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಯಾಗಿದೆ ಎಂದು ಹೇಳಿದರು. ಎಲ್ಲಾ ಫಲಾನುಭವಿಗಳು ಸರ್ಕಾರಕ್ಕೆ ಆಶೀರ್ವಾದ ಮಾಡುತ್ತಿದ್ದಾರೆ. ನೀವಷ್ಟೇ (ವಿರೋಧ ಪಕ್ಷ) ಯೋಜನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದೀರಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದರು. 

ಗೃಹಲಕ್ಷ್ಮಿ ಯೋಜನೆ ನಿಮ್ಮ ಕ್ಷೇತ್ರದಲ್ಲಿ  ಎಷ್ಟು ಮಂದಿಗೆ ತಲುಪಿದೆ. ಇದರಿಂದ ಆಗಿರುವ ಅನುಕೂಲವೇನು ಎನ್ನುವುದನ್ನು ಅಂಕಿ ಅಂಶ ಸಮೇತ ಬೇಕಿದ್ದರೆ ನೀಡುವೆ. ಅನಾವಶ್ಯಕವಾಗಿ ಯೋಜನೆ ಬಗ್ಗೆ ಟೀಕೆ ಮಾಡಬೇಡಿ ಎಂದು ಹೇಳಿದರು.

ಯೋಜನೆ ನಿಲ್ಲಿಸಬೇಕೆನ್ನುವುದು ನಿಮ್ಮ ಅಭಿಪ್ರಾಯವೇ? ಹಾಗಿದ್ದರೆ ನೇರವಾಗಿ ಹೇಳಿ. ಯೋಜನೆಯಿಂದ ಪ್ರಯೋಜನವಿಲ್ಲ ನಿಲ್ಲಿಸಿಬಿಡಿ ಎಂದು ಹೇಳಿ ನೋಡೋಣ, ಹಾವು ಸಾಯಬೇಕು, ಕೋಲು ಮುರಿಯಬಾರದು ಎನ್ನುವ ರೀತಿಯಲ್ಲಿ ಮಾತನಾಡಬೇಡಿ. ಹಿರಿಯರಾಗಿ ತಪ್ಪು ಸಂದೇಶ ನೀಡಬೇಡಿ ಎಂದು ಹೆಬ್ಬಾಳಕರ್ ಖಡಕ್ ಆಗಿ ಉತ್ತರಿಸಿದರು.

ಸರಾಸರಿ ನೂರು ಜನರಲ್ಲಿ 97 ಮಂದಿಗೆ ಯೋಜನೆ ತಲುಪಿದ್ದು, ಉಳಿದ ಮೂರು ಮಂದಿಗೆ ಕೆಲವೊಂದು ಕಾರಣದಿಂದ ತಲುಪಿಲ್ಲ. ಈ ಸಮಸ್ಯೆಗೆ ನಮ್ಮ ಇಲಾಖೆಯ ಅಧಿಕಾರಿಗಳು ಪರಿಹಾರ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಯೋಜನೆಯ ಹಣ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಇಲ್ಲಿ ಮಧ್ಯವರ್ತಿಗಳ ಕಾಟ ಇರುವುದಿಲ್ಲ. ವಿಧವಾ ವೇತನ ಪಡೆಯಲು ಲಂಚ ನೀಡುವ ಸ್ಥಿತಿ ಇತ್ತು. ಆದರೆ ಗೃಹಲಕ್ಷ್ಮಿ ನೇರವಾಗಿ ಫಲಾನುಭವಿಗಳಿಗೆ ತಲುಪುತ್ತಿದೆ. ಹಿರಿಯ ಶಾಸಕರು ಸದನಕ್ಕೆ ತಪ್ಪು ಮಾಹಿತಿ ನೀಡಬಾರದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿನಂತಿಸಿಕೊಂಡರು.

Related Articles

Back to top button