*ಗೃಹಲಕ್ಷ್ಮೀ ಯೋಜನೆ ಯಶಸ್ಸಿಗೆ ಬಿಜೆಪಿಯವರು ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ*

ಪ್ರಗತಿವಾಹಿನಿ ಸುದ್ದಿ: ಗೃಹಲಕ್ಷ್ಮೀ ಯೋಜನೆ ಯೋಜನೆ ಹಣ ಜಮೆಯಾದ ಬಗ್ಗೆ ನಾನು ಸದನಕ್ಕೆ ಯಾವುದೇ ತಪ್ಪು ಮಾಹಿತಿಯನ್ನು ನೀಡಿಲ್ಲ. ಈವರೆಗೆ 23 ಕಂತುಗಳ ಹಣವನ್ನು ಮಹಿಳೆಯರ ಖಾತೆಗೆ ಹಾಕಲಾಗಿದೆ ಎಂದು ತಿಳಿಸಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಗೃಹಲಕ್ಷ್ಮೀ ಯೋಜನೆಯನ್ನು ಸಹಿಸದವರು ಬಿಜೆಪಿ ನಾಯಕರು, ಗೃಹಲಕ್ಷ್ಮೀ ಯೋಜನೆ ನಾವು ಜಾರಿಗೆ ತಂದಾಗಿನಿಂದಲೂ ಅದನ್ನು ತೀವ್ರವಾಗಿ ವಿರೋಧಿಸುತ್ತಿದ್ದರು, ಹಾದಿ ಬೀದಿಯಲ್ಲಿ ಯೋಜನೆ ವಿರುದ್ಧ ಹೋರಾಟ ಮಾಡಿ ಮಾತನಾಡುತ್ತಿದ್ದರು. ಈಗ ಇದ್ದಕ್ಕಿದ್ದಂತೆ ಬಿಜೆಪಿ ನಾಯಕರಿಗೆ ಗೃಹಲಕ್ಷ್ಮೀ ಯೋಜನೆ ಬಗ್ಗೆ ಕಾಳಜಿ ಶುರುವಾಗಿದೆ ಯಾಕೆ? ಎಂದು ಪ್ರಶ್ನಿಸಿದರು.
ಎರಡು ತಿಂಗಳ ಗೃಹಲಕ್ಷ್ಮೀ ಯೋಜನೆ ಹಣ ಖಾತೆಗೆ ಜಮೆ ಆಗಿಲ್ಲ. ಜಮೆ ಆಗಿಲ್ಲದಿದ್ದರೆ ಅದನ್ನು ಹಾಕಿಸುವ ಕೆಲಸ ಮಾಡುತ್ತೇವೆ. ಗೃಹಲಕ್ಷ್ಮೀ ಯೋಜನೆ ಬಗ್ಗೆ ಯಾವುದೇ ಗೊಂದಲವೂ ಇಲ್ಲ, ಗೊಂದಲಗಳೂ ಬೇಡ. ಅನಗತ್ಯವಾಗಿ ಬಿಜೆಪಿಯವರು ಗೃಹಲಕ್ಷ್ಮೀ ಯೋಜನೆ ಯಶಸ್ಸಿಗೆ ಮಸಿಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.




