ಹಳ್ಳಿ ಹಳ್ಳಿಗಳಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಗೆ ಸಂಭ್ರಮದ ಸ್ವಾಗತ; ಮತ್ತೆ ಮತ್ತೆ ನೀವೇ ಶಾಸಕರಾಗಬೇಕು ಎಂದ ಗ್ರಾಮಸ್ಥರು


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಕ್ಷೇತ್ರಾದ್ಯಂತ ಅಭೂತಪೂರ್ವ ಸ್ವಾಗತ, ಬೆಂಬಲ ವ್ಯಕ್ತವಾಗುತ್ತಿದೆ.
ಭಾನುವಾರ ಕಾಳೇನಟ್ಟಿ ಗ್ರಾಮದಲ್ಲಿ ಪ್ರಚಾರಕ್ಕೆಂದು ತೆರಳಿದಾಗ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಲಕ್ಷ್ಮೀ ಹೆಬ್ಬಾಳಕರ್ ಆಗಮನವಾಗುತ್ತಿದ್ದಂತೆ ಗ್ರಾಮಸ್ಥರೆಲ್ಲ ಸಂಭ್ರಮದಿಂದ ಬರಮಾಡಿಕೊಂಡರು. ಕ್ಷಣ ಮಾತ್ರದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಯಿತು.

ಕಳೆದ 5 ವರ್ಷದಲ್ಲಿ ನೀವು ಮಾಡಿರುವಷ್ಟು ಅಭಿವೃದ್ಧಿಯನ್ನು ಹಿಂದೆಂದೂ ಕಂಡಿರಲಿಲ್ಲ. ನೀವು ಪ್ರಚಾರಕ್ಕೆ ಬರುವ ಅವಶ್ಯಕತೆಯೇ ಇಲ್ಲ. ನಾವೇ ನಿಮ್ಮ ಪರವಾಗಿ ಓಡಾಡಿ ಮತ ಹಾಕಿಸುತ್ತೇವೆ. ಕಳೆದ ಬಾರಿಗಿಂತ ಅತೀ ಹೆಚ್ಚು ಅಂತರದಿಂದ ನಿಮ್ಮನ್ನು ಆಯ್ಕೆ ಮಾಡಿ ಕಳಿಸುತ್ತೇವೆ. ಮತ್ತೆ ಮತ್ತೆ ನೀವೇ ನಮ್ಮ ಶಾಸಕರಾಗಿ ಬರಬೇಕು ಎಂದು ಒಕ್ಕೊರಲಿನಿಂದ ಹೇಳಿದರು.

ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ನಿಮ್ಮ ಪ್ರೀತಿ, ವಿಶ್ವಾಸ ನೋಡಿ ನನಗೆ ಮಾತೇ ಬರುತ್ತಿಲ್ಲ. ಇದೇ ಪ್ರೀತಿ ನನ್ನನ್ನು ಮತ್ತೊಮ್ಮೆ ವಿಧಾನಸೌಧದ ಮೆಟ್ಟಿಲು ಹತ್ತಿಸುತ್ತದೆ ಎನ್ನುವ ವಿಶ್ವಾಸವಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುವುದು ನಿಶ್ಚಿತವಾಗಿದ್ದು, ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರಕ್ಕೆ ತರುತ್ತೇನೆ ಎಂದು ಹೇಳಿದರು.

ಎಲ್ಲರೂ ತಪ್ಪದೆ ಮೇ 10ರಂದು ಮತದಾನ ಮಾಡಬೇಕು. ಕಾಂಗ್ರೆಸ್ ಪಕ್ಷದ ಹಸ್ತದ ಚಿನ್ಹೆಗೆ ಮತ ನೀಡುವ ಮೂಲಕ ನನ್ನನ್ನು ಆಯ್ಕೆ ಮಾಡಬೇಕು ಎಂದು ಅವರು ವಿನಂತಿಸಿದರು.
ಕಾಂಗ್ರೆಸ್ ಪಕ್ಷದ ಹಾಗೂ ಸ್ಥಳೀಯ ಹಲವಾರು ಮುಖಂಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ