Belagavi NewsBelgaum NewsKannada NewsKarnataka NewsLatest

ಇಂದಿರಾ ಗಾಂಧಿ ಆರಂಭಿಸಿದ ಅಂಗನವಾಡಿಗೆ ಶಕ್ತಿ ತುಂಬಿದ ಲಕ್ಷ್ಮೀ ಹೆಬ್ಬಾಳಕರ್; ಬಡವರ ಮಕ್ಕಳಿಗೆ ಶೈಕ್ಷಣಿಕ ಬಲ ; ಸದ್ದಿಲ್ಲದೆ ಸತ್ಕಾರ್ಯಕ್ಕೆ ಶ್ರೀಕಾರ ಹಾಡಿದ ಸಚಿವರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನ ಮಂಡಳದ ಇಡೀ ಸದನ ಮುಡಾ ಮತ್ತು ವಾಲ್ಮೀಕಿ ಹಗರಣದಲ್ಲಿ ಮುಳುಗಿದ ಸಂದರ್ಭದಲ್ಲಿ ಈ ರಾಜ್ಯದ ಬಡ ಮಕ್ಕಳಿಗೆ ಶೈಕ್ಷಣಿಕ ಶಕ್ತಿ ತುಂಬುವ, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಮಹತ್ಕಾರ್ಯವನ್ನು ತಮ್ಮ ಇಲಾಖೆಯ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಡಿದ್ದಾರೆ.

ರಾಜಕೀಯ ಏನೇ ಇರಲಿ, ಇತ್ತೀಚಿನ ವರ್ಷಗಳಲ್ಲಿ ಸರಕಾರದಿಂದ ಸಮಾಜಕ್ಕೆ ಸಿಕ್ಕಿದ ಅತ್ಯಂತ ಉಪಯುಕ್ತವಾದ ಉಲ್ಲೇಖನೀಯ ಯೋಜನೆ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸುವ ನಿರ್ಣಯ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಉಸಿರಿಲ್ಲದ, ಹಸಿದಬಡ, ಮಧ್ಯಮ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣವೆಂಬುದು ಮರೀಚಿಕೆ ಎನ್ನುತ್ತಿರುವ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. 

1975ರಲ್ಲಿ, ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಕನಸಿನ ಯೋಜನೆ ಅಂಗನವಾಡಿಯನ್ನು ಆರಂಭಿಸಿದರು. ಕರ್ನಾಟಕದ, ಮೈಸೂರು ಜಿಲ್ಲೆಯ ಟಿ ನರಸೀಪುರದಲ್ಲಿ ಮೊದಲ ಅಂಗನವಾಡಿ ಆರಂಭವಾಯಿತು. ಆರಂಭಿಕವಾಗಿ 100 ಇದ್ದ ಅಂಗನವಾಡಿಗಳ ಸಂಖ್ಯೆ ಈಗ 60 ಸಾವಿರಕ್ಕೂ ಅಧಿಕ. ಈಗ ಇಂದಿರಾ ಗಾಂಧಿಯವರಿಂದ ಆರಂಭವಾದ ಅದೇ ಯೋಜನೆಗೆ ಬಲ ತುಂಬುವ ಐತಿಹಾಸಿಕ ಕಾರ್ಯವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಡಿದ್ದಾರೆ. ಅಗನವಾಡಿ ಮೊದಲು ಆರಂಭವಾದ ಕರ್ನಾಟಕದಲ್ಲೇ ಅಂಗನವಾಡಿಗೆ ಸರಕಾರಿ ಮಾಂಟೆಸ್ಸರಿ ಎಂದು ನಾಮಕರಣ ಮಾಡಿ ಉನ್ನತೀಕರಿಸುವ ಐತಿಹಾಸಿಕ ಕೆಲಸವನ್ನು ಮಾಡಿದ್ದಾರೆ. ದೇಶದಲ್ಲೇ ಮೊದಲ ಬಾರಿಗೆ ಅಂಗನವಾಡಿ ಕೇಂದ್ರದಲ್ಲಿ ಎಲ್ಕೆಜಿ ಮತ್ತು ಯುಕೆಜಿ ಪರಿಚಯಿಸುತ್ತಿರುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

ಪೂರ್ವ ಪ್ರಾಥಮಿಕ ಶಿಕ್ಷಣ ಇಂದು ಎಷ್ಟು ಮಹತ್ವ ಪಡೆದುಕೊಂಡಿದೆ, ಸಮಾಜದಲ್ಲಿ ಅದೆಷ್ಟು ಪ್ರತಿಷ್ಠೆಯ ವಿಷಯವಾಗಿದೆ ಎನ್ನುವುದು ಯಾರಿಗೂ ತಿಳಿಯದ ವಿಷಯವಲ್ಲ. 

ಆರ್ಥಿಕವಾಗಿ ಸಬಲರಾಗಿರುವವರ ಜೊತೆಗೆ ಬಡ ಮತ್ತು ಮಧ್ಯಮ ವರ್ಗದ ಪಾಲಕರು ಪೈಪೋಟಿಗಿಳಿದು, ಸೋತು ಇನ್ನಷ್ಟು ಕುಗ್ಗಿ ಹೋಗುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ನೀಡಲು ತೆಗೆದುಕೊಂಡಿರುವ ಕ್ರಾಂತಿಕಾರಿ  ಹೆಜ್ಜೆ ಸರಕಾರಿ ಮಾಂಟೆಸ್ಸರಿ.

 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ, ಸಮಾಜಕ್ಕಾಗಿ ಏನಾದರೊಂದು ಸಾಧನೆ ಮಾಡಲೇಬೇಕು ಎಂದು ಅಧಿಕಾರ ಸ್ವೀಕರಿಸಿದ ದಿನವೇ ತೆಗೆದುಕೊಂಡ ನಿರ್ಧಾರವನ್ನು ಲಕ್ಷ್ಮೀ ಹೆಬ್ಬಾಳಕರ್ ಸಾಧಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ, ಯಾವುದೆ ಅಬ್ಬರ, ಆಡಂಬರಗಳಿಲ್ಲದೆ ಅತ್ಯಂತ ಸರಳವಾಗಿ ಇಂತಹ ಜನೋಪಯೋಗಿ ಯೋಜನೆಯೊಂದನ್ನು ಜಾರಿಗೊಳಿಸಿದರು. ಲಕ್ಷ್ಮೀ ಹೆಬ್ಬಾಳಕರ್ ಮೊದಲಿನಿಂದಲೂ ಛಲಗಾತಿ ಮಹಿಳೆ. ಅಂದುಕೊಂಡಿದ್ದನ್ನು ಸಾಧಿಸುವ ಹಠ ಅವರದ್ದು. 

 ಇಂದಿನ ವ್ಯವಸ್ಥೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರುವ ಇಂತಹ  ಯೋಜನೆ ಜಾರಿಗೊಳಿಸುವುದು ಸುಲಭದ ಕೆಲಸವಲ್ಲ. ಆಗಲೇ ಶೈಕ್ಷಣಿಕ ವರ್ಷ ಆರಂಭವಾಗಿದ್ದರಿಂದ ಸಮಯಾವಕಾಶವೂ ಸಾಕಷ್ಟಿರಲಿಲ್ಲ. ಶುಭಸ್ಯ ಶೀಘ್ರಂ ಎನ್ನುವಂತೆ ಅತ್ಯಂತ ಕಡಿಮೆ ಅವಧಿಯಲ್ಲಿ ಜಾರಿಗೊಳಿಸಬೇಕಾದ ಸಂದರ್ಭದಲ್ಲಿ ಒಂದಿಷ್ಟು ಸಣ್ಣಪುಟ್ಟ ಲೋಪಗಳು ಉಳಿದುಕೊಂಡಿರಬಹುದು. ಮೊದಲ ವರ್ಷವೇ ಎಲ್ಲವೂ ಅಚ್ಚುಕಟ್ಟಾಗಿ ಆಗುತ್ತದೆ ಎನ್ನಲಾಗದು. ಆದರೆ ಒಳ್ಳೆಯ ಕೆಲಕ್ಕೆ ನಾಂದಿ ಹಾಡಿದ್ದಾರೆ. ಅಂತಹ ಇಚ್ಚಾಸಕ್ತಿಯನ್ನು ಸಚಿವರು ತೋರಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಸ್ತಾವನೆ ಇಟ್ಟಾಗ, ಒಳ್ಳೆಯ ಕೆಲಸ, ಮೊದಲು ಮಾಡಮ್ಮ ಎಂದು ಹಾರೈಸಿ, ಶಕ್ತಿ ತುಂಬಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಮ್ಮಿಂದ ಎಲ್ಲ ರೀತಿಯ ಸಹಕಾರದ ಭರವಸೆ ನೀಡಿದರು. ಎಲ್ಲದರ ಪರಿಣಾಮವಾಗಿ ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಹೊಸದೊಂದು ಕ್ರಾಂತಿಯಾಗಿದೆ. ಮುಂದಿನ ದಿನಗಳಲ್ಲಿ ಯೋಜನೆ ಇನ್ನಷ್ಟು ಸುಧಾರಿಸುವ ಜೊತೆಗೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಇನ್ನಷ್ಟು ಹೊಸ ಕನಸಿನ ಯೋಜನೆಗಳು ಜಾರಿಯಾಗಲಿ ಎಂದು ಹಾರೈಸೋಣ.

“ ದೇಶದಲ್ಲಿಯೇ ಮೊದಲ ಬಾರಿಗೆ ಅಂಗನವಾಡಿಯಲ್ಲಿ LKG ಮತ್ತು UKG ತರಗತಿಗೆ ಚಾಲನೆ ನೀಡಿದ್ದು ನನ್ನ ಭಾಗ್ಯವಾಗಿದೆ. ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಅವರ ಎದುರು ನಾನು ಪ್ರಸ್ತಾವನೆ ಇಟ್ಟಾಗ, ಒಳ್ಳೆಯ ಕೆಲಸ, ಮೊದಲು ಮಾಡಮ್ಮ ಎಂದು ಹಾರೈಸಿ, ಶಕ್ತಿ ತುಂಬಿದರು. ಸಾಂಕೇತಿಗವಾಗಿ 250 ಅಂಗನವಾಡಿಗಳಲ್ಲಿ LKG ಮತ್ತು UKG ತರಗತಿಗೆ ಚಾಲನೆ ನೀಡಲಾಗಿದೆ. ಪೌಷ್ಠಿಕ ಆಹಾರ ಜೊತೆಗೆ ಗುಣಮಟ್ಟದ ಶಿಕ್ಷಣ ನೀಡುವುದು ಪ್ರಮುಖವಾಗಿದೆ. ಆಧುನಿಕ ಯುಗದಲ್ಲಿ ಮಾರ್ಡನ್ ಶಿಕ್ಷಣ ನೀಡುವುದು ನಮ್ಮ ಇಲಾಖೆ ಹಾಗೂ ಸರ್ಕಾರದ ಗುರಿಯಾಗಿದೆ. ಮುಂದಿನ ಹಂತದಲ್ಲಿ ರಾಜ್ಯದಲ್ಲಿ 18 ಸಾವಿರ ಅಂಗನವಾಡಿಯಲ್ಲಿ LKG ಮತ್ತು UKG ಆರಂಭ ಮಾಡಲಾಗುತ್ತದೆ”

ಲಕ್ಷ್ಮೀ ಹೆಬ್ಬಾಳಕರ್, ಯೋಜನೆಯ ರೂವಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button