*ಸಚಿವರ ನಡೆ ಜನರ ಮನೆ ಬಾಗಿಲ ಕಡೆ: ಹಳ್ಳಿ ಹಳ್ಳಿಗೆ ತೆರಳಿ ಸಮಸ್ಯೆ ಆಲಿಕೆ* *ಲಕ್ಷ್ಮೀ ಹೆಬ್ಬಾಳಕರ್ ಅವರಿಂದ ಹೊಸ ಸಂಪ್ರದಾಯಕ್ಕೆ ನಾಂದಿ*
* *ಶಾಲೆಗಳಲ್ಲಿ ಕೊಠಡಿ ನಿರ್ಮಾಣಕ್ಕೆ 5 ಕೋಟಿ ರೂಪಾಯಿ*
ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ* : ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗೆ ತೆರಳಿ ಖುದ್ದಾಗಿ ಸಮಸ್ಯೆ ಆಲಿಸಿ ಪರಿಹರಿಸುವ ವಿನೂತನ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕರೂ ಆಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆರಂಭಿಸಿದ್ದಾರೆ.
ಸೋಮವಾರ ನಂದಿಹಳ್ಳಿ ಗ್ರಾಮಕ್ಕೆ ತೆರಳಿದ ಸಚಿವರು ಜನರ ಅಹವಾಲುಗಳನ್ನು ಆಲಿಸಿದರು. ಈ ವಾರ ಪೂರ್ತಿ ಹಳ್ಳಿ ಭೇಟಿ ಮುಂದುವರಿಸಲಿರುವ ಅವರು, ಜನರ ಮನೆ ಬಾಗಿಲಿಗೆ ಸಚಿವರೊಬ್ಬರು ತೆರಳಿ ಸಮಸ್ಯೆ ಕೇಳುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಸಚಿವರ ಮನೆ ಬಾಗಿಲಿಗೆ ಜನರು ಸಮಸ್ಯೆ ಹೊತ್ತು ಬರುವುದನ್ನು ತಪ್ಪಿಸಲು ಸಚಿವರೇ ಜನರ ಮನೆ ಬಾಗಿಲಿನತ್ತ ಹೆಜ್ಜೆ ಹಾಕುತ್ತಿರುವುದಕ್ಕೆ ಕ್ಷೇತ್ರದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ.
ಈ ವೇಳೆ ನಂದಿಹಳ್ಳಿಯಲ್ಲಿ ಮಾತನಾಡಿದ ಸಚಿವರು, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಶಾಲೆಗಳಲ್ಲಿ ಕೊಠಡಿಗಳ ನಿರ್ಮಾಣಕ್ಕೆ 5 ಕೋಟಿ ರೂಪಾಯಿ ಮೀಸಲಿಡಲಾಗುತ್ತಿದೆ ಎಂದು ಹೇಳಿದರು.
ನಂದಿಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಜನಸ್ಪಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಶಾಲೆಗಳ ಅಭಿವೃದ್ಧಿಯೇ ನನ್ನ ಗುರಿ. ಇದರಲ್ಲಿ ಯಾವುದೇ ರಾಜಕೀಯ ಮಾಡಬಾರದು. ಶಾಲೆಗೆ ಅಗತ್ಯವಿರುವ ಅತಿಥಿ ಶಿಕ್ಷಕರ ನೇಮಕ ಮಾಡಲು ಈಗಾಗಲೇ ಕ್ಷೇತ್ರದ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಗ್ರಾಮಗಳ ಅಭಿವೃದ್ಧಿ ಸೇರಿದಂತೆ ಸರ್ವಜನಾಂಗಗಳ ಏಳಿಗೆಗಾಗಿ ಹಗಲಿರುಳು ಶ್ರಮಿಸಲು ಬದ್ದಳಾಗಿದ್ದೇನೆ. ಮರಾಠಿ ಶಾಲೆಗಳ ಅಭಿವೃದ್ಧಿಗೂ ಬದ್ಧವಾಗಿದ್ದೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಈ ವೇಳೆ ಯುವರಾಜ ಕದಂ, ರೇಖಾ ಶಿಂಗೆನ್ನವರ್, ಮಹಾದೇವ ಜಾಧವ್, ಶಶಿಕಾಂತ್ ಪಾಟೀಲ್, ಸಹದೇವ ಬೆಳಗಾಂವಕರ, ರಾಮದಾಸ್ ಜಾಧವ್, ಸಂಜೀವ್ ಮಾಧರ, ಮಲ್ಲಿಕಾರ್ಜುನ ಲೋಕುರ,, ಮಾರುತಿ ಲೋಕುರ, ಗಣಪತಿ ಜಾಧವ್, ಅಶೋಕ್ ಜಾಧವ್, ಪರಶುರಾಮ್ ಜಂಗಳೆ, ನಿಂಗಪ್ಪ ಹಂಪಣ್ಣವರ, ನೀಲವ್ವ ಬಾಚೂಕರ, ರೇಖಾ ಮಾದರ, ಯಲ್ಲಪ್ಪ ಹಗೆದಾಳ, ವಸಂತ ಗೋರೆ, ಡಾ.ಕಿರಣ್ ಲೊಂಡೆ ಸೇರಿದಂತೆ ಹಲವು ಮಂದಿ ಉಪಪಸ್ಥಿತರಿದ್ದರು.
ನಂತರ ಗ್ರಾಮದ ಹಿರಿಯ ಮರಾಠಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯ ಕುಂದುಕೊರತೆಗಳನ್ನು ಆಲಿಸಿ, ಮೂಲ ಸೌಕರ್ಯಗಳನ್ನು ಒದಗಿಸುವ ಭರವಸೆ ನೀಡಿದರು. ಈ ವೇಳೆ ಗ್ರಾಮದ ಹಿರಿಯರು, ಶಾಲಾ ಸಿಬ್ಬಂದಿ, ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಇದಾದ ನಂತರ ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ ಸಚಿವರು, ಅಹವಾಲು ಸ್ವೀಕರಿಸಿದರು. ಜನಸ್ಪಂದನೆಯ ಮೂಲಕ ಜನರ ಸಂಕಷ್ಟಗಳನ್ನು ಆಲಿಸುವುದು ನನ್ನ ಕರ್ತವ್ಯ, ಮನವಿ ಸ್ವೀಕರಿಸಿ ಪರಿಹಾರ ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು. ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುವ ಕೆಲಸವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ