Belagavi NewsBelgaum NewsPolitics

*ಧರ್ಮಸ್ಥಳಕ್ಕೆ ಕುಟುಂಬ ಸಮೇತ ಬಂದು ಪ್ರಮಾಣ ಮಾಡಿ: ಸಿ.ಟಿ.ರವಿಗೆ ಸವಾಲು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಬಿಜೆಪಿ ಎಂಎಲ್ ಸಿ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿ.ಟಿ.ರವಿ ವಿರುದ್ಧ ಕೆಂಡಾಮಂಡಲರಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಮಹಾನುಭಾವ ಆಡಬಾರದ ಮಾತುಗಳನ್ನು ಆಡಿ, ಹೆಣ್ಣು ಕುಲಕ್ಕೆ ಅಪಮಾನ ಮಾಡಿದ್ದಲ್ಲದೇ, ಈಗ ತಾನು ಆ ಪದ ಬಳಕೆ ಮಾಡಿಯೇ ಇಲ್ಲ ಎಂದು ನಾಟಕವಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸುದ್ದಿವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಸಿ.ಟಿ. ರವಿ ಬಳಸಿದ ಪದ ಬಳಕೆಯಿಂದ ನಾನು ಘಾಸಿಗೊಂಡಿದ್ದೇನೆ. ಸಾಕಷ್ಟು ನೊಂದಿದ್ದೇನೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯನ್ನು ಮಾನಸಿಕವಾಗಿ ಕುಗ್ಗಿಸುವ ಯತ್ನ ನಡೆಸುತ್ತಿದ್ದಾರೆ. ಅಂಥಹ ಪದ ಬಳಕೆ ಯಾವ ಹೆಣ್ಣುಮಕ್ಕಳೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ನನ್ನ ಬಗ್ಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾಗಿರುವ ನನಗೆ ಇಂಥಹ ಕೆಟ್ಟ ಪದ ಬಳಕೆ ಮಾಡಿರುವುದು ಇಡೀ ಹೆಣ್ಣುಕುಲಕ್ಕೆ ಮಾಡಿರುವ ಅವಮಾನ. ಇದನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ಹೋರಾಟದಿಂದ ನಾನು ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದರು.

ಇದೇ ವೇಳೆ ಸಿ.ಟಿ.ರವಿ ಅವರಿಗೆ ಸವಾಲು ಹಾಕಿದ್ದಾರೆ. ನೀವು ದೇವರನ್ನು ನಂಬುತ್ತೀರಾ ಅಲ್ಲವೇ? ಹಾಗಾದರೆ ಧರ್ಮಸ್ಥಳಕ್ಕೆ ಬನ್ನಿ. ಮಂಜುನಾಥ ಸ್ವಾಮಿ ಮೇಲೆ ಆಣೆ, ಪ್ರಮಾಣ ಮಾಡಿ ಹೇಳಿ. ನಾನು ಆ ಪದ ಬಳಸಿಲ್ಲ ಎಂದು ಹೇಳಲಿ. ನಾನು ಕೂಡ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಬರುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button