
ಅಂಗನವಾಡಿ ಕಟ್ಟಡ, ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಚಾಲನೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧಳಾಗಿದ್ದು, ಇಲಾಖೆಯ ಕೆಲಸಗಳ ಒತ್ತಡದ ನಡುವೆಯೂ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಂಗಳವಾರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಅಭಿವೃದ್ಧಿ ಕೆಲಸಗಳು ಕುಂಠಿತವಾಗಬಾರದು ಎನ್ನುವುದು ನನ್ನ ಉದ್ದೇಶ ಎಂದರು.

ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಸಾವಗಾಂವ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಸಚಿವರು ಸ್ಥಳೀಯರ ಸಲಹೆ ಸೂಚನೆ ಪಡೆದು, ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದರು. ಈ ವೇಳೆ ಸ್ಥಳೀಯ ಜನ ಪ್ರತಿನಿಧಿಗಳು, ಗ್ರಾಮಸ್ಥರು, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಂಗನವಾಡಿ ಕಟ್ಟಡಕ್ಕೆ ಭೂಮಿ ಪೂಜೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾವಗಾಂವ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ನಿರ್ಮಾಣದ ಕಾಮಗಾರಿಗೆ ಸ್ಥಳೀಯರ ಸಮ್ಮುಖದಲ್ಲಿ ಸಚಿವರು ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಗ್ರಾಮದ ಹಿರಿಯರು, ಇಲಾಖೆಯ ಉಪ ನಿರ್ದೇಶಕರಾದ ನಾಗರಾಜ್, ಸಿಡಿಪಿಒ ಸುಮಿತ್ರಾ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಬಸ್ತವಾಡದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ
ಸಂತಿ ಬಸ್ತವಾಡ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾಮಗಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದರು. ಇದೇ ಸಮಯದಲ್ಲಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಸಭೆ ನಡೆಸಿ, ಗ್ರಾಮದ ಕುಂದುಕೊರತೆ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅಭಿವೃದ್ಧಿ ಕೆಲಸಗಳ ಕುರಿತು ಚರ್ಚೆ ನಡೆಸಿದರು.
ಬಳಿಕ ಸಂತಿ ಬಸ್ತವಾಡ ಗ್ರಾಮದಲ್ಲಿ ಅಭಿವೃದ್ಧಿ ಹಂತದಲ್ಲಿರುವ ಶ್ರೀ ಸಾತೇರಿ ಮಂದಿರದ ಕಟ್ಟಡ ಕಾಮಗಾರಿಯ ಪರಿಶೀಲನೆ ನಡೆಸಿದ ಸಚಿವರು, ಕಟ್ಟಡದ ಕಾಮಗಾರಿ ಕುರಿತು ಮಾಹಿತಿ ಪಡೆದರು.
ಈ ವೇಳೆ ಮುಖಂಡರಾದ ಯುವರಾಜ್ ಕದಂ, ದೇಮಣ್ಣ ನಾಯ್ಕ್, ಬಸು ಭೀರಮುಟ್ಟಿ, ಆಸೀಫ್ ತಹಶಿಲ್ದಾರ್, ಅಜಯ್ ಚನ್ನಿಕುಪ್ಪಿ, ಸಾತುಲೆ ಗುರವ್, ಅನಿಲ್ ಕರ್ಲೇಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ