*ಮಾತೃ ಭಾಷೆಯನ್ನು ಪ್ರೀತಿಸಿ, ಅನ್ಯಭಾಷೆಗಳನ್ನು ಗೌರವಿಸುವ ಔದಾರ್ಯತೆ ಕನ್ನಡಿಗರದ್ದು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*
ಪ್ರಗತಿವಾಹಿನಿ ಸುದ್ದಿ, ಕಾರದಗಾ (ನಿಪ್ಪಾಣಿ) : ಮಾತೃ ಭಾಷೆಯನ್ನು ಪ್ರೀತಿಸಿ, ಅನ್ಯ ಭಾಷೆಗಳನ್ನು ಗೌರವಿಸುವುದು ಕನ್ನಡಿಗರ ಔದಾರ್ಯವಾಗಿದೆ. ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು, 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಭಾನುವಾರ 6ನೇ ಕನ್ನಡ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರದಗಾದಲ್ಲಿ ಕನ್ನಡಿಗರು ಮತ್ತು ಮರಾಠಿ ಭಾಷಿಕರು ಅನ್ಯೋನ್ಯವಾಗಿದ್ದಾರೆ. ಇದು ಮುಂದುವರಿಯಬೇಕು. ನಮ್ಮ ಭಾಷೆ, ಕಲೆ, ಸಂಸ್ಕೃತಿಯನ್ನು ಬೆಳಸುವ ಜೊತೆಗೆ ಅನ್ಯರನ್ನೂ ಗೌರವಿಸಿವುದು ನಮ್ಮ ದೊಡ್ಡತನ ಎಂದು ಅವರು ಹೇಳಿದರು.
ಕನ್ನಡ ಭಾಷೆ ಅತ್ಯಂತ ಶ್ರೀಮಂತವಾಗಿದೆ. 8 ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದೆ. ಕನ್ನಡಿಗರು, ಭಾರತೀಯರು ವಿವಿಧತೆಯಲ್ಲಿ ಏಕತೆನ್ನು ಕಂಡವರು. ಅದರಿಂದಾಗಿಯೇ ಭಾರತ ಇಂದು ವಿಶ್ವ ಗುರುವಾಗಿ ಮುನ್ನಡೆಯುತ್ತಿದೆ. ಕರ್ನಾಟಕ ರಾಜ್ಯ ನಾಮಕರಣದ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಇಂತಹ ಸಮಾವೇಶದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ಅತ್ಯಂತ ಅದ್ದೂರಿಯಾಗಿ ಇಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ. ಮುಂದಿನ ವರ್ಷದಿಂದ ರಾಜ್ಯ ಸರಕಾರದಿಂದ ಈ ಸಮಾವೇಶಕ್ಕೆ ನೆರವನ್ನು ಕೊಡಿಸುವ ಜೊತೆಗೆ ಇಲ್ಲಿಯ ಸಂಘಟನೆಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಲು ಪ್ರಯತ್ನ ಮಾಡುತ್ತೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ, ಪತ್ರಕರ್ತ ಸರಜೂ ಕಾಟ್ಕರ ಅವರು ಮಾತನಾಡಿ, “ಜಗತ್ತು ಬರದಿಂದ ಬದಲಾಗುತ್ತಿದೆ. ಜಗತ್ತಿಗೆ ಅನೇಕ ತಲ್ಲಣ, ಆತಂಕಗಳು ಕಾಡುತ್ತಿವೆ. ಜಾಗತೀಕರಣ, ಭಯೋತ್ಪಾದನೆ, ಆರ್ಥಿಕ ಹಿಂಜರಿತ, ಕೋಮು ಗಲಭೆಗಳು ನಮಗೆ ಕಾಡಿಸುತ್ತಿವೆ. ಇರುವುದೊಂದೇ ಭೂಮಿ, ಆದರೆ ಅದಕ್ಕೂ ಗಂಡಾಂತರ ಕಾದಿದೆ. ಈ ಸಂದಿಗ್ದ ಕಾಲದಲ್ಲಿ ಸಾಹಿತಿಗಳು, ಕಲಾವಿದರು, ಲೇಖಕರು ಮತ್ತು ಪತ್ರಕರ್ತರ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ. ಈ ಜಗತ್ತನ್ನು ಸುಂದರವಾಗಿ, ವಿವೇಕಯುತವಾಗಿ ಇಡುವ ಕಾಳಜಿ ಉಳ್ಳವರಾಗಿದ್ದಾರೆ. ಅವರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದರೆ ಜಗತ್ತಿನ ಯಾವ ಇತಿಹಾಸವೂ ಅವರನ್ನು ಕ್ಷಮಿಸಲಾರದು” ಎಂದು ಹೇಳಿದರು.
ಇದಕ್ಕೂ ಮೊದಲು ಸಮ್ಮೇಳನದ ಸರ್ವಾಧ್ಯಕ್ಷ ಸರಜೂ ಕಾಟ್ಕರ ದಂಪತಿಗಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕುದುರೆ ಕುಣಿತ, ಝಾಂಜ್ ಪಥಕ್, ವಿದ್ಯಾರ್ಥಿಗಳ ನೃತ್ಯ, ವಿವಿಧ ರೂಪಗಳ ಪ್ರದರ್ಶನ ಮನ ಸೆಳೆಯುವಂತಿತ್ತು.
ವೇದಿಕೆಗೆ ಮೆರವಣಿಗೆ ಆಗಮಿಸಿ ಚಿಂಚಣಿಯ ಸಿದ್ಧ ಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿಯವರ ಮಂಟಪ ಹಾಗೂ ವೇದಿಕೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಸೇರಿದಂತೆ ಗಣ್ಯರು ಉದ್ಘಾಟಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಅಲ್ಲಮಪ್ರಭು ಸ್ವಾಮೀಜಿ ಅವರ ಅಗಲಿಕೆ ಹಿನ್ನೆಲೆಯಲ್ಲಿ ಮೌನಾಚರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ “ಅಲ್ಲಮಪ್ರಭು ಮಹಾಸ್ವಾಮಿಗಳ ಸ್ಮರಣಿಕೆ ಹಾಗೂ ಕಬ್ಬಿಗನೆದೆಯ ಕಾವ್ಯ ಪುಸ್ತಕಗಳನ್ನು ಸಮ್ಮೇಳನದ ಸರ್ವಾಧ್ಯಕ್ಷ ಡಾ. ಸರಜೂ ಕಾಟ್ಕರ್, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚೆನ್ನರಾಜ ಹಟ್ಟಿಹೊಳಿ ಬಿಡುಗಡೆ ಮಾಡಿದರು.
ಕನ್ನಡ ಬಳಗದ ಗೌರವಾಧ್ಯಕ್ಷ ರಾಜು ಖಿಚಡೆ ಪ್ರಾಸ್ತಾವಿಕವಾಗಿ ಮಾತನಾಡಿ, “ಕಳೆದ 6 ವರ್ಷಗಳಿಂದ ಗಡಿ ಭಾಗದಲ್ಲಿ ಚಿಂಚಣಿ ಪೂಜ್ಯರ ಪ್ರೇರಣೆಯಿಂದ ಕನ್ನಡ ಸಮ್ಮೇಳನ ಯಶಸ್ವಿಯಾಗಿ ನಡೆಯುತ್ತಿದ್ದು, ಈ ಭಾಗದಲ್ಲಿ ಕನ್ನಡ ಭಾಷೆ ಸಂಸ್ಕೃತಿ ಉಳಿವಿಗೆ ಶ್ರಮಿಸುವುದಾಗಿ ಹೇಳಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಸ್ವಾಮೀಜಿಯವರು ಮಾತನಾಡಿ, ಕನ್ನಡ ಕರ್ನಾಟಕ ಕನ್ನಡಿಗ ಎಂಬ ಧ್ಯೇಯ ಹೊಂದಿದ್ದ ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ ಅವರ ಕಾಣಿಕೆ ಗಡಿ ಭಾಗದಲ್ಲಿ ಸಾಕಷ್ಟು ಇದೆ. ಅವರ ಹಾಕಿ ಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು” ಎಂದು ಹೇಳಿದರು.
ಸಮಾರಂಭದಲ್ಲಿ ಢೋಣೆವಾಡಿ ಮಠದ ಸಾಧನಾನಂದ ಮಹಾರಾಜರು, ವಿಧಾನ ಪರಿಷತ್ ಸದಸ್ಯ ಚೆನ್ನರಾಜ ಹಟ್ಟಿಹೊಳಿ, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ಸುಭಾಷ್ ಜೋಶಿ, ರಾಜು ವಡ್ಡರ, ಪ್ರಾಚಾರ್ಯೆ ಎಮ್ ಕೆ ಶಾಂತಲಾ, ಸುಜಾತಾ ವಡ್ಡರ, ವಿನಯಶ್ರೀ ಪಾಟೀಲ, ಪಂಕಜ ಪಾಟೀಲ, ಕುಭೇರ ಅವಟೆ, ರಾಜು ಪವಾರ, ಸುಮಿತ್ರಾ ಉಗಳೆ, ಡಾ. ಸುಬ್ರಾವ ಎಂಟೆತ್ತಿನವರ, ಡಾ. ರಾಮಕೃಷ್ಣ ಮರಾಠ, ಎಸ್ ವೈ ಹಂಜಿ, ಬಾಬುರಾವ್ ನಡೋಣಿ, ಡಾ ಪಿ ಜಿ ಕೆಂಪಣ್ಣವರ, ಲಲಿತಾ ಹಿರೇಮಠ, ಡಾ. ವಿಜಯ ಧಾರವಾಡ, ಶ್ರೀಪಾದ ಕುಂಬಾರ. ಡಾ. ಹೊಂಬಯ್ಯ ಹೊನ್ನಲಗೆರೆ, ಸಂಜಯ ಗಾವಡೆ, ಬಾಳು ನವನಾಳೆ, ಶಕುಂತಲಾ ಕಮತೆ, ಮಾಣಿಕ ಚಂದಗಡೆ, ಕಿರಣ ಸದಲಗೆ, ಎಮ್ ಎನ್ ಬಳಗಾರ ಮುಂತಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ