*ರಾಮದುರ್ಗದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ ಖಚಿತ: ಶಾಸಕ ಅಶೋಕ್ ಪಟ್ಟಣ*
ಪ್ರಗತಿವಾಹಿನಿ ಸುದ್ದಿ: ಬಿಜೆಪಿಯವರು ಎಷ್ಟೇ ಅಬ್ಬರಿಸಿದರೂ ರಾಮದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಮುನ್ನಡೆ ಸಿಗುವುದು ಖಚಿತ. ಕಾಂಗ್ರೆಸ್ ಅಭ್ಯರ್ಥಿ ಪರ ಕ್ಷೇತ್ರದಾದ್ಯಂತ ಉತ್ತಮ ವಾತಾವರಣ ನಿರ್ಮಾಣವಾಗಿದೆ ಎಂದು ಶಾಸಕ ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೇಳಿದರು.
ರಾಮದುರ್ಗ ವಿಧಾನಸಭಾ ಕ್ಷೇತ್ರದ ಸಾಲಹಳ್ಳಿಯಲ್ಲಿ ಗುರುವಾರ ನಡೆದ ಹುಲಕುಂದ ಹಾಗೂ ಬಟಕುರ್ಕಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಶಾಸಕರು, ರಾಮದುರ್ಗದಿಂದ 20 ರಿಂದ 25 ಸಾವಿರ ಮತಗಳು ಮುನ್ನಡೆ ಸಿಗುವುದು ಗ್ಯಾರಂಟಿ. ಕ್ಷೇತ್ರದಲ್ಲಿ ಒಗ್ಗಟಾಗಿ ಕೆಲಸ ಮಾಡಿ, ಮುನ್ನಡೆ ನೀಡೋಣ ಎಂದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಎಂದು ಮೃಣಾಲ್ ಅವರನ್ನು ಕಣಕ್ಕಿಳಿಸಿಲ್ಲ. ಕಳೆದ 11 ವರ್ಷಗಳಿಂದ ಪಕ್ಷದ ಯುವ ಘಟಕದಲ್ಲಿ ಕೆಲಸ ಮಾಡಿದ್ದು, ಕ್ಷೇತ್ರದ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಜೊತೆಗೆ ಅವರ ಸಮಾಜಮುಖಿ ಕೆಲಸಗಳನ್ನು ಗುರುತಿಸಿ ಟಿಕೆಟ್ ನೀಡಲಾಗಿದೆ. ಮೃಣಾಲ್ ಹೆಬ್ಬಾಳ್ಕರ್ ವಿದ್ಯಾವಂತನಾಗಿದ್ದು, ಕ್ಷೇತ್ರದ ಪರ ಕಾಳಜಿ ಹೊಂದಿದ್ದಾನೆ ಎಂದು ಶಾಸಕರ ಅಶೋಕ್ ಪಟ್ಟಣ್ ಹೇಳಿದರು.
ಸಚಿವರಾಗುವ ಕನಸಿನಲ್ಲಿ ಬಿಜೆಪಿ ಅಭ್ಯರ್ಥಿಗಳು
ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಯೋಚಿಸದ ಬಿಜೆಪಿಯವರಿಗೆ ಅಧಿಕಾರ ದಾಹ ಮಾತ್ರ ನಿಂತಿಲ್ಲ. ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದರೆ ಸಚಿವರಾಗಲು ರಾಜ್ಯದಿಂದ ದೊಡ್ಡ ದಂಡೇ ರೆಡಿ ಆಗುತ್ತಿದೆ. ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಕೂಡ ಗೆದ್ದರೆ ಸಚಿವ ಆಗ್ತಿನಿ ಅಂತ ಮತ ಹೇಳುತ್ತಿದ್ದಾರೆ. ಪ್ರಹ್ಲಾದ್ ಜೋಶಿ, ಬಸವರಾ ಬೊಮ್ಮಾಯಿ, ಶೋಭಾ ಕರಂದ್ಲಾಚೆ ಸೇರಿದಂತೆ ಸ್ಪರ್ಧಿಸಿರುವ ಎಲ್ಲರೂ ಸಚಿವರಾಗುತ್ತೇವೆ ಎನ್ನುತ್ತಿದ್ದಾರೆ. ಈ ಹಿಂದೆ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸದ ವ್ಯಕ್ತಿ ಇಂದು ಬೆಳಗಾವಿಯಲ್ಲಿ ಮತ ಕೇಳಲು ನೈತಿಕತೆ ಇದೆಯೇ ಎಂದು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನಿಸಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ತನ್ನದೇ ಕನಸು ಕಂಡಿರುವ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್, ನನ್ನ ಹಾಗೂ ಜಿಲ್ಲೆಯ ಶಾಸಕರ ಸಹಕಾರದೊಂದಿಗೆ ಕೆಲಸ ಮಾಡಲಿದ್ದಾನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಪ್ರದೀಪ್ ಪಟ್ಟಣ್, ಹಾಸ್ಯ ಕಲಾವಿದ ರಾಜು ತಾಳಿಕೋಟೆ, ಕೆಪಿಸಿಸಿ ಸದಸ್ಯರಾದ ರಾಜೇಂದ್ರ ಪಾಟೀಲ್, ಸುರೇಶ್ ಪತ್ಯಾಪುರ, ರಾಮದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೋಮಶೇಖರ ಶಿದ್ದಲಿಂಗಪ್ಪನವರ್, ಮುಂಬಾ ರೆಡ್ಡಿ, ಹನುಮಂತ ವಡ್ಡರ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ