Kannada NewsKarnataka NewsLatestPolitics

*ರಾಜ್ಯಪಾಲರ ಭಾಷಣ ಅತ್ಯಂತ ಅರ್ಥಗರ್ಭಿತ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ರಾಜ್ಯ ವಿಧಾನ ಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣ ಅತ್ಯಂತ ಅರ್ಥಗರ್ಭಿತವಾಗಿದೆ. ಸರ್ಕಾರದ ಸಾಧನೆಗಳ ಪ್ರತಿಬಿಂಬವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಭಾಷಣದ ಪ್ರಮುಖ ಹೈಲೈಟ್ಸ್ ಆಗಿತ್ತು. ಸರ್ಕಾರದ ಶಕ್ತಿ, ಅನ್ನ ಭಾಗ್ಯ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಮತ್ತು ಯುವ ನಿಧಿ ಎಂಬ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿ ಹಾಗು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯಿಂದಾಗಿ ಬಸವಳಿದ ಜನರಿಗೆ ಪಂಚ ಗ್ಯಾರಂಟಿ ಯೋಜನೆಗಳು ನೆಮ್ಮದಿ ನೀಡಿವೆ. ಈ ಯೋಜನೆಗಳಿಗಾಗಿ ಬೃಹತ್ ಸಂಖ್ಯೆಯಲ್ಲಿ ಬಂದ ಅರ್ಜಿಗಳೇ ಸಾಕ್ಷಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ನನ್ನ ಇಲಾಖೆಗೆ ಸಂಬಂಧಿಸಿದಂತೆ ಗೃಹಲಕ್ಷ್ಮಿ ಯೋಜನೆಗೆ ಇದುವರೆಗೂ 17500 ಕೋಟಿ ರೂಪಾಯಿ ಅನುದಾನವನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯಡಿ ನೋಂದಾಯಿಸಿಕೊಂಡಿರುವ 1.17 ಕೋಟಿ ಮಹಿಳಾ ಫಲಾನುಭವಿಗಳಿಗೆ ಡಿಬಿಟಿ ಮೂಲಕ ಜನವರಿ ವರಗೆ 11037 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ಇಂಥ ಯೋಜನೆಯಿಂದ ರಾಜ್ಯದ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಣೆಯತ್ತ ಸಾಗಿದೆ ಎಂದು ಸಚಿವರು ಹೇಳಿದರು.

ಗ್ಯಾರಂಟಿ ಯೋಜನೆಗಳಿಂದ ಜನರ ಆರ್ಥಿಕತೆಗೆ ಹೊಸ ಉತ್ತೇಜನ ನೀಡಿದೆ. ನಾವು ಅಧಿಕಾರಕ್ಕೆ ಬಂದ ಬಳಿಕ 77 ಸಾವಿರ ಕೋಟಿ ರೂಪಾಯಿ ಬಂಡವಾಳ ಹರಿದು ಬಂದಿದೆ. ಇದಕ್ಕಿಂದ ದೊಡ್ಡ ಸಾಧನೆ ಇನ್ನೇನು ಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು. ಬರ ಪರಿಸ್ಥಿತಿಯಲ್ಲೂ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಿ, ಅಭಿವೃದ್ಧಿ ಯೋಜನೆಗಳಿಗೂ ಅನುಧಾನ ನೀಡುತ್ತಾ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಿದ್ದರಾಮಯ್ಯ ಕೊಂಡ್ಯೊಯುತ್ತಿದ್ದಾರೆ. ಇವನ್ನೆಲ್ಲ ರಾಜ್ಯಪಾಲರು ತಮ್ಮ ಭಾಷಣದಲ್ಲಿ ಅತ್ಯಂತ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

Related Articles

Back to top button