ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ರಾಜ್ಯಸಭಾ ಸದಸ್ಯೆಯೂ ಆದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ರಾಜ್ಯದ ನಿರೀಕ್ಷೆಯನ್ನು ಹುಸಿಗೊಳಿಸಿದ್ದು, ಇದೊಂದು ತಾರತಮ್ಯ ಬಜೆಟ್ ಆಗಿದೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಕೇಂದ್ರ ಬಜೆಟ್ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಒಂದು ಕಣ್ಣಿಗೆ ಬೆಣ್ಣಿ, ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತೆ ಬಜೆಟ್ ನಲ್ಲಿ ಕೆಲ ಅಂಶಗಳು ಬಿಂಬಿತವಾಗಿವೆ. ಎನ್ ಡಿಎ ಸರ್ಕಾರದ ಭಾಗವಾಗಿರುವ ಆಂಧ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಭರಪೂರ ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ, ಕರ್ನಾಟಕ ಸೇರಿದಂತೆ ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳ ನಿರೀಕ್ಷೆ ಹುಸಿಯಾಗಿದೆ. ಕರ್ನಾಟಕದ ಬಾಕಿ ಇರುವ ಯೋಜನೆಗಳಿಗೂ ಅನುದಾನ ನೀಡಿಲ್ಲ ಎಂದು ತಿಳಿಸಿದ್ದಾರೆ.
ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿದೆ. ಆದರೂ, ಮತ್ತೆ ಮತ್ತೆ, ನಿರುದ್ಯೋಗ ಸಮಸ್ಯೆ ನಿವಾರಿಸುವ ಘೋಷಣೆಗಳು ಮರುಕಳಿಸುತ್ತಲೇ ಇವೆ. ಉನ್ನತ ಶಿಕ್ಷಣಕ್ಕೆ ಸರ್ಕಾರದಿಂದ 10 ಲಕ್ಷದವರೆಗೆ ಸಾಲ ಸೌಲಭ್ಯ ಘೋಷಿಸಲಾಗಿದೆ. ಆದರೆ, ಇದು ಬರೀ ಸಾಲದ ಮೊತ್ತ ಹೆಚ್ಚಳ ಮಾಡಲಾಗಿದೆ ಅಷ್ಟೇ. ರೈತರಿಗೆ ಘೋಷಿಸಲಾಗಿರುವ ಕಿಸಾನ್ ಕ್ರೆಡಿರ್ಟ್ ಕಾರ್ಡ್ ನಿಂದ ಯಾವುದೇ ಉಪಯೋಗವಿಲ್ಲ ಎಂದು ಸಚಿವರು ಹೇಳಿದ್ದಾರೆ.
ಪ್ರಮುಖವಾಗಿ ಕೇಂದ್ರ ಬಜೆಟ್ ನಲ್ಲಿ ಲೋಕಸಭಾ ಚುನಾವಣೆ ವೇಳೆ ನಮ್ಮ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಚುನಾವಣಾ ಪ್ರಣಾಳಿಕೆಯ ಅಂಶಗಳೇ ಹೆಚ್ಚಿವೆ. ನಮ್ಮ ಪ್ರಣಾಳಿಕೆಯನ್ನು ಅಂಶಗಳನ್ನು ಕೇಂದ್ರದ ಎನ್ ಡಿಎ ಸರ್ಕಾರ ಕಳವು ಮಾಡಿದೆ. ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರದಂತಹ ತುರ್ತು ಸಮಸ್ಯೆಗಳಿಗೆ ಸ್ಪಂದನೆ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ