ಗ್ರಾಮೀಣ ಕ್ಷೇತ್ರದ ವಿವಿಧೆಡೆ ಲಕ್ಷ್ಮೀ ಹೆಬ್ಬಾಳಕರ್ ಅಬ್ಬರದ ಪ್ರಚಾರ; ಎಲ್ಲೆಡೆ ಹಬ್ಬದ ವಾತಾವರಣದಲ್ಲಿ ಸ್ವಾಗತ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತದ ವಿವಿಧೆಡೆ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅಬ್ಬರದ ಪ್ರಚಾರ ಮುಂದುವರಿಸಿದ್ದಾರೆ.
ಬುಧವಾರ ಕ್ಷೇತ್ರದ ತುಮ್ಮರುಗುದ್ದಿ, ಸೋಮನಟ್ಟಿ, ಭೀಮಗಡ, ಕರಿಕಟ್ಟಿ, ಸಿದ್ದನಳ್ಳಿ, ಖನಗಾಂವ್ (ಬಿಕೆ ಮತ್ತು ಕೆಎಚ್) ಮೊದಲಾದೆಡೆ ಪ್ರಚಾರ ನಡೆಸಿದರು. ಎಲ್ಲೆಡೆ ಜನರು ಹಬ್ಬದ ವಾತಾವರಣದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸ್ವಾಗತಿಸಿದರು. ಮಹಿಳೆಯರು ಆರತಿ ಬೆಳಗಿ ಬರಮಾಡಿಕೊಳ್ಳುತ್ತಿದ್ದರು. ವೃದ್ದರು ಮನೆಯ ಮಗಳೇ ಬಂದ ರೀತಿಯಲ್ಲಿ ಸಂಭ್ರಮ ಪಡುತ್ತಿರುವ ದೃಷ್ಯ ಸಾಮಾನ್ಯವಾಗಿತ್ತು. ಯಾವುದೇ ಕಾರಣಕ್ಕೂ ನಿಮ್ಮಂತ ಶಾಸಕರನ್ನು ಕಳೆದುಕೊಳ್ಳುವುದಿಲ್ಲ. ಈ ಬಿರು ಬಿಸಿಲಿನಲ್ಲಿ ನೀವು ಓಡಾಡುವುದು ಬೇಡ, ನಿಮ್ಮನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮಗೆ ಬಿಡಿ ಎಂದು ಜನರು ವಿನಂತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ಕ್ಷೇತ್ರದ ಎಲ್ಲೆಡೆ ಜನರೂ ನನ್ನನ್ನು ಅಕ್ಕ, ತಂಗಿ, ತಾಯಿ, ಮಗಳು ಎನ್ನುವ ರೀತಿಯಲ್ಲಿ ಕಾಣುತ್ತಿದ್ದಾರೆ. ಇಡೀ ಕ್ಷೇತ್ರವೇ ನನ್ನ ಕುಟುಂಬ ಎಂದು ಕಂಡಿದ್ದೇನೆ. ನಿಮ್ಮಂತಹ ಜನರನ್ನು ಪಡೆದ ನಾನೇ ಧನ್ಯ. ಕ್ಷೇತ್ರದಾದ್ಯಂತ ಅಪಾರ ಬೆಂಬಲ ವ್ಯಕ್ತವಾಗುತ್ತಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಅಂತರದಿಂದ ಗೆಲ್ಲುವುದು ನಿಶ್ಚಿತ. ವಿರೋಧಿಗಳೇ ಇಲ್ಲ ಎನ್ನುವಂತಹ ವಾತಾವರಣ ಎಂದು ವಿನಂತಿಸಿದರು.
ಪ್ರವಾಹ, ಕೊರೋನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಎಂದೂ ನಾನು ಮತ್ತು ನನ್ನ ಸಹೋದರ ಚನ್ನರಾಜ ಹಟ್ಟಿಹೊಳಿ ಹಾಗೂ ಮಗ ಮೃಣಾಲ ಹೆಬ್ಬಾಳಕರ್ ಮನೆಯಲ್ಲಿ ಕೂಡ್ರಲಿಲ್ಲ. ಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದೇವೆ. ವೈದ್ಯಕೀಯ ನೆರವು, ಆರ್ಥಿಕ ನೆರವು ಸೇರಿದಂತೆ ಸಾಧ್ಯವಾದ ಎಲ್ಲ ರೀತಿಯಿಂದ ಸಹಾಯ ಮಾಡಿದ್ದೇವೆ. ಮನೆಯ ಮಗಳಾಗಿ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಹಾಗಾಗಿ ನೀವೆಂದೂ ನನ್ನ ಕೈಬಿಡುವುದಿಲ್ಲ ಎನ್ನುವ ವಿಶ್ವಾಸ, ನಂಬಿಕೆ ನಿಮ್ಮ ಮೇಲಿದೆ ಎಂದು ಭಾವುಕರಾಗಿ ಹೇಳಿದರು.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುವುದು ಖಚಿತ. ನಮ್ಮದೇ ಸರಕಾರ ಬಂದಲ್ಲಿ ಇನ್ನೂ ಹೆಚ್ಚಿನ ಕೆಲಸ ತರಲು ಸಹಾಯವಾಗಲಿದೆ. ಜನರ ಸಹಕಾರದೊಂದಿಗೆ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿಯಾಗಿ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ಕಳೆದ 5 ವರ್ಷದಲ್ಲಿ ನಾನು ಮಾಡಿದ ಅಭಿವೃದ್ಧಿ ನೋಡಿ ಮತ ನೀಡಿ. ಮೊದಲ ಅವಧಿಯಲ್ಲಿ ಕ್ಷೇತ್ರಕ್ಕೆ ಮೂಲಭೂತ ಸೌಲಭ್ಯಗಳನ್ನು ತರುವುದಕ್ಕೆ ಆದ್ಯತೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಅನೇಕ ದೊಡ್ಡ ದೊಡ್ಡ ಯೋಜನೆಗಳನ್ನು ತರುವ ಉದ್ದೇಶವಿದೆ. ಶೈಕ್ಷಣಿಕವಾಗಿಯೂ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು. ಯುವಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶವಾಗುವಂತಹ ಯೋಜನೆಗಳನ್ನು ತರಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರಚಾರದ ವೇಳೆ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ಶೇಖರ್ ಹೊಸೂರಿ, ಶಿವಶಂಕರ ಮಳಗಲಿ, ಕಲ್ಲಪ್ಪ ಶಿಣಗಿ, ಸತ್ಯಪ್ಪ ನಂದ್ಯಾಗೋಳ, ಗಂಗಾರಾಮ ಯದ್ದಲಗುಡ್ಡ, ಕಲ್ಲಪ್ಪ ಸುತಗಟ್ಟಿ, ವಿಲ್ಸನ್ ಮಹಾರ್, ಮಲ್ಲಪ್ಪ ಗೊಸಾಂವಿ, ಶಿವಶಂಕರ ಪಾಟೀಲ, ಶಿವಾಜಿ ತಳವಾರ, ಶೇಖರ ಶಿಣಗಿ, ಲಕ್ಷ್ಮಣ ಕೆಂಪದಿನ್ನಿ, ಲಕ್ಷ್ಮಣ ಹೊಂಕಳಿ, ಚನ್ನಬಸ್ಸು ಧರನಟ್ಟಿ, ಮಹಾದೇವ ಬುಡ್ರಿ, ಲಗಮಣ್ಣ ಸುಲಧಾಳ, ಯಲ್ಲಪ್ಪ ಅಮಾನಿ ಹಾಗೂ ಹಲವಾರು ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ