*ಎಲ್ಲಾ ವರ್ಗದವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸರ್ಕಾರ ನಮ್ಮದು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣಾ ಸಮಾರಂಭದಲ್ಲಿ ಸಚಿವರ ಹೇಳಿಕೆ
ಪ್ರಗತಿವಾಹಿನಿ ಸುದ್ದಿ: ಕೇಂದ್ರದಲ್ಲಾಗಲಿ ಅಥವಾ ರಾಜ್ಯದಲ್ಲಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ಮಹಿಳೆಯರಿಗೆ, ಕಾರ್ಮಿಕರಿಗೆ, ರೈತರಿಗೆ ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಯಮನಾಪೂರ ಕೈಗಾರಿಕಾ ಪ್ರದೇಶದಲ್ಲಿರುವ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಸೋಮವಾರ ನಡೆದ ಶ್ರಮಿಕ ತಾತ್ಕಾಲಿಕ ವಸತಿ ಸಮುಚ್ಛಯಗಳ ಉದ್ಘಾಟನೆ ಹಾಗೂ ಬೆಳಗಾವಿ ಜಿಲ್ಲೆಯ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಪ್ರತಿಯೊಬ್ಬರ ಶ್ರೇಯೋಭಿವೃದ್ಧಿಯನ್ನು ಕರ್ನಾಟಕ ಸರ್ಕಾರ ಬಯಸುತ್ತದೆ ಎಂದರು.

ಸಂತೋಷ್ ಲಾಡ್ ಅವರು ಕಾರ್ಮಿಕ ಇಲಾಖೆ ಸಚಿವರಾದ ಬಳಿಕ ಇಲಾಖೆಗೆ ಹೊಸ ಸ್ಪರ್ಶ ಕೊಟ್ಟಿದ್ದಾರೆ. ಸಚಿವ ಸಂಪುಟದ ಅತ್ಯಂತ ಕ್ರೀಯಾಶೀಲ ಮಂತ್ರಿಯಾಗಿದ್ದಾರೆ. ಸಂಘಟಿತ, ಅಸಂಘಟಿತ ಕಾರ್ಮಿಕರ ವಲಯದಲ್ಲಿ ವಿವಿಧ 91 ವಲಯಗಳನ್ನು (ಸೆಕ್ಟರ್) ಗುರುತಿಸಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಾರ್ಮಿಕರ ಮಕ್ಕಳಿಗಾಗಿ ಕಾರ್ಮಿಕ ಇಲಾಖೆ ವತಿಯಿಂದ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಬೆಳಗಾವಿ ಜಿಲ್ಲೆ ಇಡೀ ಕರ್ನಾಟಕಕ್ಕೆ ಅತ್ಯಂತ ದೊಡ್ಡ ಜಿಲ್ಲೆ. ಹೀಗಾಗಿ ಬೆಳಗಾವಿಗೆ ಮೂರು ಕಾರ್ಮಿಕ ಶಾಲೆಗಳನ್ನು ಮಂಜೂರು ಮಾಡಬೇಕು ಎಂದು ಸಚಿವರು ಮನವಿ ಮಾಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹಳಷ್ಟು ಕಾರ್ಮಿಕರು ಲೇಬರ್ ಕಾರ್ಡ್ ನವೀಕರಣ ಮಾಡಿಸಿಲ್ಲ. ಹೀಗಾಗಿ ಲೇಬರ್ ಕಾರ್ಡ್ ನವೀಕರಣ ಪದ್ಧತಿಯನ್ನು ಕೊಂಚ ಸರಳೀಕರಿಸಬೇಕು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆ ಸಚಿವರಾದ ಸಂತೋಷ್ ಲಾಡ್, ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಸಕರಾದ ಆಸಿಫ್ ಸೇಠ್, ಬಾಬಾಸಾಹೇಬ್ ಪಾಟೀಲ್, ಉಪ ಕಾರ್ಮಿಕ ಆಯುಕ್ತರಾದ ನಾಗೇಶ್ ಡಿ.ಜಿ, ಜಂಟಿ ಕಾರ್ಯದರ್ಶಿ ಉಮೇಶ್ ಎ.ಎಚ್, ಕಾರ್ಯ ನಿರ್ವಾಹಕ ಅಧಿಕಾರಿ ಭಾರತಿ, ವಿಜಯಕುಮಾರ್ ಪಾಟೀಲ್, ಅಲಿ ಸರ್, ಮುಂಡರಗಿ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.