*ದೇಶ ಕಟ್ಟುವಲ್ಲಿ ಕಾಂಗ್ರೆಸ್ ಪಾತ್ರ ದೊಡ್ಡದು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್*
ಪ್ರಗತಿವಾಹಿನಿ ಸುದ್ದಿ; ಉಡುಪಿ: ವಿಶ್ವದಲ್ಲಿ ಭಾರತಕ್ಕೆ ಉತ್ತಮ ಹೆಸರಿದೆ. ದೇಶ ಕಟ್ಟುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಬಹುದೊಡ್ಡದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ‘ಯುವ ಭಾರತ್’ ಸಾಂಸ್ಕೃತಿಕ ಸ್ಪರ್ಧೆ-2023 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಸೂಜಿ ತಯಾರಿ ಮಾಡುವುದಕ್ಕೂ ಆಗುತ್ತಿರಲಿಲ್ಲ. ಇದೀ ವಿಶ್ವದಲ್ಲೇ ಪ್ರಮುಖ ದೇಶವಾಗಿ ಹೊರಹೊಮ್ಮಿದ್ದೇವೆ. ಇದಕ್ಕೆ ಕಾರಣ ಕಾಂಗ್ರೆಸ್ ಪಕ್ಷ ಎಂದರು.
ಸ್ವಾತಂತ್ರ್ಯ ಸಿಕ್ಕಿ 300 ವರ್ಷಗಳ ಬಳಿಕ ಅಮೆರಿಕ ವಿಶ್ವದ ದೊಡ್ಡಣ್ಣ ಅನಿಸಿಕೊಂಡಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 77 ವರ್ಷಗಳಾಗಿವೆ. ಕೆಲವು ಕ್ಷೇತ್ರಗಳಲ್ಲಿ ಭಾರತ ಅಮೆರಿಕವನ್ನು ಮೀರಿಸುವಂತ ಸಾಧನೆ ಮಾಡಿದೆ ಎಂದು ತಿಳಿಸಿದರು.
ಈ ದೇಶಕ್ಕೆ ಬಿಜೆಪಿಯ ಕೊಡುಗೆ ಏನು ಎಂದು ಪ್ರಶ್ನಿಸಿದರು. ಛಿದ್ರವಾಗಿದ್ದ ದೇಶವನ್ನು ಕಟ್ಟುವುದೇ ಒಂದು ಸವಾಲಾಗಿತ್ತು. ಈ ಹಂತದಲ್ಲಿ ದೇಶ ಕಟ್ಟಲು ಕಾಂಗ್ರೆಸ್ ಪಕ್ಷ ಸಾಕಷ್ಟು ಬೆವರು ಹರಿಸಿದೆ ಎಂದು ತಿಳಿಸಿದರು. ಯುವಕರು ಹೆಚ್ಚು ಸಂಘಟಿತರಾಗಿ ಕಾಂಗ್ರೆಸ್ ಪಕ್ಷ ಸೇರುವಂತಾಗಬೇಕು ಎಂದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೊಟ್ಯನ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಪ್ರಸಾದ್ ಕಾಂಚನ್, ಅಶೋಕ್ ಕುಮಾರ್ ಕೊಡವೂರು, ದಿನೇಶ್ ಹೆಗ್ಡೆ ಮೊಳಹಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸೇರಿದಂತೆ ಯುವ ಕಾಂಗ್ರೆಸ್ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ