*ಮುಖ್ಯಮಂತ್ರಿಗಳಿಗೆ ಸದನದಲ್ಲಿ ಧನ್ಯವಾದ ಸಲ್ಲಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದು ಬೆಂಗಳೂರಿನ ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯನ್ನು ವಸತಿಯುತ ಶಾಲೆಯನ್ನಾಗಿ ಪರಿವರ್ತಿಸಲು ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವದೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ವಿಧಾನ ಪರಿಷತ್ ನಲ್ಲಿ ಮಂಗಳವಾರ ಭರವಸೆ ನೀಡಿದರು.
ನಿಯಮ 72 ರ ಅಡಿಯಲ್ಲಿ ಕೆ.ಎ.ತಿಪ್ಪೇಸ್ವಾಮಿ ಪ್ರಶ್ನೆಗೆ ಸಚಿವರು ಉತ್ತರ ನೀಡುತ್ತಿದ್ದರು. ವಸತಿ ಶಾಲೆಯನ್ನಾಗಿ ಪರಿವರ್ತಿಸಲು ಈಗಾಗಲೇ ಮಂಜೂರಾಗಿರುವ 20 ಹುದ್ದೆಗಳೊಂದಿಗೆ ಹೆಚ್ಚುವರಿಯಾಗಿ 12 ಹುದ್ದೆಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಪರಿಸ್ಕೃತ ಪ್ರಸ್ತಾವನೆ ಸ್ವೀಕೃತವಾಗಿದ್ದು, ಆರ್ಥಿಕ ಇಲಾಖೆಯಿಂದ ಮಂಜೂರಾತಿ ಹಾಗೂ ನಿಯಮನುಸಾರ ಭರ್ತಿ ಮಾಡಿದ ನಂತರ ವಸತಿಯುತ ಶಲೆಯನ್ನಾಗಿ ಪರಿವರ್ತಿಸಲು ಕ್ರಮ ವಹಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ನಮ್ಮ ಇಲಾಖೆ ಸೇವೆ ಮಾಡುವ ಇಲಾಖೆ, ದುರ್ಬಲರ ಜೀವನಕ್ಕೆ ಅಡಿಪಾಯ ಮಾಡುವ ಇಲಾಖೆ. ಸಮಾಜದ ಕಾಳಜಿ ಇಟ್ಟುಕೊಂಡು ಇಂತಹ ಇಲಾಖೆ ನಿಭಾಯಿಸಲು ಮುಖ್ಯಮಂತ್ರಿಗಳು ಅವಕಾಶ ಕೊಟ್ಟಿದ್ದಾರೆ ಅದಕ್ಕಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಜೊತೆಗೆ ಈ ಚಿಂತನ ಚಾವಡಿಯಲ್ಲಿ ಹಲವಾರು ಸದಸ್ಯರು ಉತ್ತಮ ಸಲಹೆಗಳನ್ನು ಕೊಟ್ಟಿದ್ದಾರೆ. ಅಧಿಕಾರಿಗಳೊಂದಿಗೆ ಚರ್ಚಿಸಿ, ಆದಷ್ಟು ಶೀಘ್ರ ಸಮಗ್ರ ಅಧ್ಯಯನ ಮಾಡಿ ಮುಖ್ಯಮಂತ್ರಿಗಳೊಂದಿಗೂ ಚರ್ಚಿಸಿ, ಉತ್ತಮ ನಿರ್ಧಾರ ಮಾಡುತ್ತೇನೆ ಎಂದು ಸಚಿವರು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ