*ನೊಂದ ಮಹಿಳೆಗೆ ಕೇವಲ ಐದು ಗಂಟೆಗಳ ಒಳಗೆ ವಿಧವಾ ವೇತನ ಮಂಜೂರು ಮಾಡಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್*
ಪ್ರಗತಿವಾಹಿನಿ ಸುದ್ದಿ; ಉಡುಪಿ: ನೊಂದ ಮಹಿಳೆಗೆ 5 ಗಂಟೆಯೊಳಗೆ ವಿಧವಾ ವೇತನ ಮಂಜೂರು ಮಾಡಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾನವೀಯತೆ ಮೆರೆದಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ತೀವ್ರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇತ್ತೀಚೆಗೆ ರಸ್ತೆ ಕಾಣದೆ ಕೆರೆಗೆ ಬಿದ್ದು ಮರಣ ಹೊಂದಿದ ಕುಂದಾಪುರ ತಾಲೂಕಿನ ಉಳ್ತುರೂ ಗ್ರಾಮದ ದಿವಂಗತ ದಿನಕರ ಶೆಟ್ಟಿ ಅವರ ಪತ್ನಿ ಎಂ ಶೀಲಾ ಶೆಟ್ಟಿ ಅವರು ಇಂದು, ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಇಂದು ಮಧ್ಯಾಹ್ನ 2 ಗಂಟೆಗೆ ಭೇಟಿ ಮಾಡಿ, ವಿಧವಾ ವೇತನ ಮಂಜೂರು ಕೋರಿ ಸಾರ್ವಜನಿಕ ಅಹವಾಲು ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಿದರು.
ಈ ಮನವಿ ಕುರಿತು ತಕ್ಷಣದಲ್ಲಿ ಕ್ರಮ ಕೈಗೊಳ್ಳುವಂತೆ ಕುಂದಾಪುರ ತಹಸಿಲ್ದಾರ್ ಅವರಿಗೆ ಸಚಿವರು ಸೂಚನೆ ನೀಡಿದ್ದರು. ಸಚಿವರ ಸೂಚನೆಯಂತೆ ,ಇಂದು ಸಂಜೆ 6 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಪ್ರಾಕೃತಿಕ ವಿಕೋಪ ನಿರ್ವಹಣೆ ಕುರಿತು ನಡೆದ ಸಭೆಯ ನಂತರ ನೊಂದ ಮಹಿಳೆಯನ್ನು ಸಭೆಗೆ ಕರೆಸಿ, ಆಕೆಗೆ ವಿಧವಾ ವೇತನ ಮಂಜೂರಾತಿ ಆದೇಶ ಪತ್ರವನ್ನು ನೀಡಿದ ಸಚಿವರು, ಆ ಮಹಿಳೆಗೆ ಸಾಂತ್ವನ ಹೇಳಿದರು.
ಸಚಿವರ ಈ ತುರ್ತು ಸ್ಪಂದನೆಗೆ ಮಹಿಳೆ ತುಂಬು ಕೃತಜ್ಞತೆಗಳನ್ನು ಸಲ್ಲಿಸಿದರು. ಸಚಿವರ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ