*ಯುವಕರು ಬದ್ಧತೆ, ಜಾತ್ಯಾತೀತ ತತ್ವದ ಮೇಲೆ ಕೆಲಸ ಮಾಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳಕರ್*

ಬೆಳಗಾವಿ ನಗರ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯಲ್ಲಿ ಹೇಳಿಕೆ
ಪ್ರಗತಿವಾಹಿನಿ ಸುದ್ದಿ: ಯುವಕರು ಬಹಳ ಬದ್ಧತೆ ಹಾಗೂ ಜಾತ್ಯಾತೀತ ತತ್ವದ ಮೇಲೆ ಕೆಲಸ ಮಾಡಬೇಕು. ರಾಜಕಾರಣ ಎನ್ನುವುದು ಕೇವಲ ಟೈಮ್ ಪಾಸ್ ಅಲ್ಲ, ಇದು ಫುಲ್ ಟೈಮ್ ಕೆಲಸ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಬೆಳಗಾವಿ ನಗರ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಸಚಿವರು, ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ಯುವಕರು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ನಾಯಕರೆಲ್ಲರೂ ಯುವ ಕಾಂಗ್ರೆಸ್‌ನಿಂದಲೇ ಬೆಳೆದು ಬಂದವರು. ನಾನು ಕೂಡ ಸಾಮಾನ್ಯ ಕಾರ್ಯಕರ್ತೆಯಾಗಿ ಪಕ್ಷದಲ್ಲಿ ಕೆಲಸ ಮಾಡಿ, ಈ ಸ್ಥಾನಕ್ಕೆ ಬಂದಿದ್ದೇನೆ ಎಂದರು.

ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಮುಂದಿನ ಚುನಾವಣೆಗಳಲ್ಲಿ ಗೆಲುವಿಗೆ ಶ್ರಮಿಸಬೇಕು. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಎಲ್ಲರ ಬಗ್ಗೆಯೂ ಕಾಳಜಿ ವಹಿಸುವ ಪಕ್ಷ. ಬಿಜೆಪಿಯವರು ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಪಕ್ಷ ಹಾಗೂ ಸರ್ಕಾರದ ವಿರುದ್ಧ ನಿಂತರವಾಗಿ ಅಪ್ರಚಾರ ಮಾಡುತ್ತಾ ಬರುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕಿಡಿ ಕಾರಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಷಿಯಲ್ ಮೀಡಿಯಾಗಳನ್ನು ಬಳಸಿಕೊಂಡು ಪಕ್ಷ ಹಾಗೂ ಸರ್ಕಾರದ ಕೆಲಸಗಳನ್ನು ಹೆಚ್ಚು ಪ್ರಚಾರ ಮಾಡಬೇಕು. ಬೂತ್ ಮಟ್ಟದಲ್ಲಿ ಪಕ್ಷವನ್ನು ಕಟ್ಟಿ ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಪಕ್ಷದಲ್ಲಿ ಉಜ್ವಲ ಭವಿಷ್ಯ ಕಟ್ಟಿಕೊಳ್ಳಿ ಎಂದು ಸಚಿವರು ಯುವ ಕಾರ್ಯಕರ್ತರಿಗೆ ಹಾರೈಸಿದರು.
ಸಭೆಯಲ್ಲಿ ಸಚಿವರಾದ ಸಂತೋಷ್ ಲಾಡ್, ರಾಜ್ಯ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಮಂಜುನಾಥ್ ಎಚ್.ಎಸ್, ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಉಪಾಧ್ಯಕ್ಷೆ ದೀಪಿಕಾ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಭಿಲಾಷ್, ನಾಗರಾಜ್ ಸೇರಿದಂತೆ ಯುವ ಕಾಂಗ್ರೆಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.