Kannada NewsKarnataka NewsLatest

ಜಿಲ್ಲಾಧಿಕಾರಿ ಕಂಪೌಂಡನ್ನೇ ಖಾಸಗಿ ವ್ಯಕ್ತಿಗಳಿಗೆ ಬರೆದುಕೊಟ್ಟ ಭೂಮಾಪಕ

(ಮತ್ತಷ್ಟು ಮಾಹಿತಿಗಳೊಂದಿಗೆ ಮರು ಪ್ರಕಟಣೆ)

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಸದಾಶಿವ ನಗರದಲ್ಲಿರುವ ಜಿಲ್ಲಾಧಿಕಾರಿ ಕಂಪೌಂಡ್ ಎಂದು ದಾಖಲಾಗಿರುವ ಸಿಟಿ ಸರ್ವೆ ನಂಬರ್ ೪೮೬೬ಎ/೧೯ ಆಸ್ತಿಯನ್ನು ತಿದ್ದುಪಡಿ ಮಾಡಿ ಸಿಟಿ ಸರ್ವೆ ನಂಬರ್ ೪೮೭೩ಎ/೧ ಎಂದು ಹೊಸ ನಂಬರ ಅನಧಿಕೃತವಾಗಿ ಸೃಷ್ಟಿಸಿ, ಖಾಸಗಿ ವ್ಯಕ್ತಿಗಳ ಹೆಸರುಗಳನ್ನು ದಾಖಲಿಸಿ ಸರ್ಕಾರಿ ಆಸ್ತಿ ದುರ್ಬಳಕೆ ಮಾಡಿರುವುದು ಕಂಡು ಬಂದಿದ್ದರಿಂದ ವಾರ್ಡ ಭೂಮಾಪಕರಾದ ಪ್ರಶಾಂತ. ಎನ್.ಕಟ್ಟಿಮನಿ ಅವರನ್ನು ಅಮಾನತ್ತಗೊಳಿಸಲಾಗಿದೆ ಎಂದು ನಗರಮಾಪನ ಉತ್ತರವಲಯ ಭೂದಾಖಲೆಗಳ ಜಂಟಿ ನಿರ್ದೇಶಕರಾದ ಜಗದೀಶ ಆರ್.ರೂಗಿ ಅವರು ತಿಳಿಸಿದ್ದಾರೆ.
ಬೆಳಗಾವಿಯ ಸದಾಶಿವ ನಗರದ ಸಿ.ಸ.ನಂ.೪೮೬೬ಎ/೧೯ ನೇದ್ದರ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ದುರ್ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿಯು ತಿಳಿದು ಬಂದ ಮೇರೆಗೆ ಈ ಆಸ್ತಿಯ ಆಸ್ತಿ ಕಾರ್ಡನ್ನು ಪರಿಶೀಲಿಸಿ ನೋಡಿದಾಗ ಸಿ.ಸ.ನಂ.೪೮೬೬ಎ/೧೯ರ ಆಸ್ತಿ ಪ್ರಕಟಣಾ ಪತ್ರವನ್ನು ಮತ್ತು ವಿಚಾರಣಾ ವಹಿಯನ್ನು ಪರಿಶೀಲಿಸಲಾಗಿ ಮೂಲ ನಗರಮಾಪನ ಸಮಯದಲ್ಲಿ ಸದರಿ ಆಸ್ತಿಗೆ ಕರ್ನಾಟಕ ಸರಕಾರ ಜಿಲ್ಲಾಧಿಕಾರಿಯವರ ಕಂಪೌಂಡ ಪೈಕಿ ಅಂತಾ ನಮೂದು ಇರುತ್ತದೆ.
ಆದರೆ ಇತ್ತಿಚೇಗೆ ಸದಾಶಿವ ನಗರ ವಾರ್ಡಿನ ಭೂಮಪಕರಾದ ಪ್ರಶಾಂತ ಎನ್. ಕಟ್ಟಿಮನಿ ರವರು ಸಿ.ಸ.ನಂ.೪೮೬೬ಎ/೧೯ (ಮಶೀನ ಕಾರ್ಡ ನಂಬರ ೧೯೮೪೨) ರಲ್ಲಿದ್ದ ಜಿಲ್ಲಾಧಿಕಾರಿಯವರ ಕಂಪೌಂಡ ಪೈಕಿ ಎಂದು ಇದ್ದ ನಮೂದುಗಳನ್ನು ಆಸ್ತಿ ಕಾರ್ಡಿನಲ್ಲಿ ತಿದ್ದುಪಡಿ ಮಾಡಿ ಸಿ.ಸ.ನಂ.೪೮೭೩ಎ/೧ ಕ್ಷೇತ್ರ ೧೨೨೬.೦ ಎಂದು ನಮೂದಿಸಿ ಖಾಸಗಿ ವ್ಯಕ್ತಿಗಳಾದ ಶಿವಮೂರ್ತಿ ಚನಬಸಯ್ಯಾ ದಂಡಿನಮಠ ಹಾಗೂ ವಿಶ್ವನಾಥ ಚನಬಸಯ್ಯಾ ದಂಡಿನಮಠ ರವರ ಹೆಸರುಗಳನ್ನು ದಾಖಲಿಸಿ ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳು ದುರ್ಬಳಕೆ ಮಾಡಲು ಸಹಕರಿಸಿ ಅದರಲ್ಲಿ ಶಾಮಿಲಾಗಿರುವುದು ಕಂಡುಬಂದಿರುತ್ತದೆ.
ಸದರಿ ನೌಕರರ ಕಾನೂನುಬಾಹಿರ ಕೃತ್ಯವು ಮೇಲ್ನೋಟಕ್ಕೆ ಸಾಬೀತಾಗಿದ್ದು, ಅವರ ಕರ್ತವ್ಯಲೋಪಕ್ಕೆ ಅವರನ್ನು ಅಮಾನತ್ತು ಮಾಡಿ ಆದೇಶಿಸಲಾಗಿದೆ. ಈ ಬಗ್ಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರಿಗೆ ಸಮಗ್ರವಾದ ವರದಿಯನ್ನು ಸಲ್ಲಿಸಲಾಗಿರುತ್ತದೆ ಎಂದು ರೂಗಿ ತಿಳಿಸಿದ್ದಾರೆ.
ಈ ವಿಷಯದಲ್ಲಿ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿರಲಾಗಿದ್ದು, ನಿಯಮಾನುಸಾರ ಕ್ರಮ ವಹಿಸಲಾಗುವುದು ಹಾಗೂ ಈ ರೀತಿಯಲ್ಲಿ ಸರ್ಕಾರಿ ಆಸ್ತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಖಾಸಗಿ ವ್ಯಕ್ತಗಳೊಂದಿಗೆ ಶಾಮೀಲಾಗಿ ಸಹಕರಿಸುವ ಸರ್ಕಾರಿ ನೌಕರರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ ಕಲಂ ೧೯೨ ಎ ಪ್ರಕಾರ ಸರಕಾರಿ ಸ್ವತ್ತನ್ನು ಕಬಳಿಸುವ ಉದ್ದೇಶದಿಂದ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದರೆ ಅಂತಹ ನೌಕರರಿಗೆ ೩ ವರ್ಷಗಳ ಕಾರಾಗೃಹವಾಸ ಮತ್ತು ರೂ.೫,೦೦,೦೦೦ ಜುಲ್ಮಾನೆಯನ್ನು ವಿಧಿಸಬಹುದಾಗಿದೆ.
ಖಾಸಗಿ ವ್ಯಕ್ತಿಗಳು ಮತ್ತು ಸರಕಾರಿ ನೌಕರರು ಸರಕಾರಿ ಸ್ವತ್ತುಗಳನ್ನು ಕಬಳಿಸುವ ಉದ್ದೇಶದಿಂದ ಯಾವುದೇ ಕೃತ್ಯ ಎಸಗಿದ್ದಲ್ಲಿ ಅಂತಹ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗುವುದು ಎಂದು ನಗರಮಾಪನ ಉತ್ತರವಲಯ ಭೂದಾಖಲೆಗಳ ಜಂಟಿ ನಿರ್ದೇಶಕರಾದ ಜಗದೀಶ ಆರ್.ರೂಗಿ ಅವರು ಪ್ರಕಟಣೆಯಲ್ಲಿ ತಿಳಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button