
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಪರೀತ ಮಳೆಗೆ ಬೆಳಗಾವಿ- ಕಾರವಾರ ಮಾರ್ಗದ ಅಣಶಿ ಘಟ್ಟದಲ್ಲಿ ಎರಡು ಕಡೆಗಳಲ್ಲಿ ಗುಡ್ಡ ಕುಸಿದಿದ್ದು ಸಂಚಾರ ಸ್ಥಗಿತಗೊಳಿಸಲಾಗಿದೆ.
ನಾಲ್ಕೈದು ದಿನಗಳ ಹಿಂದೆ ಇಲ್ಲಿ ಸಣ್ಣ ಪ್ರಮಾಣದಲ್ಲಿ ಕುಸಿತವಾಗಿತ್ತು. ಇದೀಗ ಭಾರೀ ಪ್ರಮಾಣದ ಮಣ್ಣು ಗಿಡಮರಗಳ ಸಹಿತ ಜಾರಿ ರಸ್ತೆಗೆ ಬಂದು ದಾಸ್ತಾನಾಗಿದ್ದು ತೆರವು ಕಾರ್ಯ ಜಾರಿಯಿದೆ.
ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಪರ್ಯಾಯ ಮಾರ್ಗ ಬಳಸುವಂತೆ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.
ಕಳೆದ ವರ್ಷದ ಮಳೆಗಾಲದಲ್ಲೂ ಅಣಶಿ ಘಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತಕ್ಕೊಳಗಾಗಿ ಹಲವು ದಿನಗಳವರೆಗೆ ಸಂಚಾರ ಸ್ಥಗಿತಗೊಂಡಿತ್ತು. ಜಿಲ್ಲಾ ಪಂಚಾಯಿತಿ ಸದಸ್ಯರಾಗಿರುವ ಗುತ್ತಿಗೆದಾರರೊಬ್ಬರು ಸ್ವಂತ ಖರ್ಚಿನಲ್ಲಿ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.
 
					 
				 
					 
					 
					 
					
 
					 
					 
					


