*ಲಂಗೋಟಿ ಮ್ಯಾನ್ ಚಿತ್ರಕ್ಕೆ ಅಖಿಲ ಕರ್ನಾಟಕ ಅರ್ಚಕರ ಹಾಗೂ ಪುರೋಹಿತರ ಪರಿಷತ್ ತೀವ್ರ ಖಂಡನೆ*
ಪ್ರಗತಿವಾಹಿನಿ ಸುದ್ದಿ: ‘ಲಂಗೋಟಿ ಮ್ಯಾನ್’ ಚಿತ್ರಕ್ಕೆ ಅಖಿಲ ಕರ್ನಾಟಕ ಅರ್ಚಕರ ಹಾಗೂ ಪುರೋಹಿತರ ಪರಿಷತ್ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಚಿತ್ರದ ಟೈಟಲ್ ಕುರಿತು ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಕಾರ್ಯಾಧ್ಯಕ್ಷ ರಾಘವೇಂದ್ರ ಭಟ್ ಅವರು ಈ ರೀತಿ ಒಂದು ಸಮುದಾಯದ ಕುರಿತು ಅಪಹಾಸ್ಯ ಮಾಡುವುದು ತಪ್ಪು. ಈ ಚಿತ್ರವನ್ನು ಬ್ಯಾನ್ ಮಾಡದಿದ್ದರೆ ಎಲ್ಲ ಚಿತ್ರಮಂದಿರಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ಲಂಗೋಟಿ, ಜನಿವಾರ ಇವು ಸನಾತನ ಸಂಸ್ಕೃತಿಯ ಪ್ರತೀಕ. ಇದು ಅಪಹಾಸ್ಯ ಮಾಡುವ ವಿಚಾರವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಎಲ್ಲರ ಶ್ರೇಯೋಭಿವೃದ್ದಿಗೆ ಪೂಜೆ ಮಾಡಿದ್ದಾರೆ. ಇಂದು ನಮ್ಮನ್ನೇ ಅಪಹಾಸ್ಯ ಮಾಡುತ್ತಿದ್ದಾರೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಚಿತ್ರ ತಂಡದವರಿಗೆ ಈ ಮೂಲಕ ಎಚ್ಚರಿಕೆ ಕೊಡುತ್ತಿದ್ದೇವೆ. ಒಂದೊಮ್ಮೆ ಇದನ್ನು ಬಿಡುಗಡೆ ಮಾಡಿದರೆ ರಾಜ್ಯಾದ್ಯಂತ ಪ್ರತಿಭಟನೆಗೆ ಅರ್ಚಕರ ಪರಿಷತ್ತ್ ನಿರ್ಧರಿಸಿದೆ ಎಂದು ಎಚ್ಚರಿಕೆ ನೀಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಅಧ್ಯಕ್ಷರ ವಿಶ್ವೇಶ್ವರ ಭಟ್ ಹಾಗೂ ಪ್ರಧಾನ ಕಾರ್ಯದರ್ಶಿ ವೇದಮೂರ್ತಿ ಭಾನುಪ್ರಕಾಶ್ ಶರ್ಮ ಕೂಡ ಲಂಗೋಟಿ ಮ್ಯಾನ್ ಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ