Advertisement -Home Add

ಬೃಹತ್ ಕ್ರೇನ್ ಬಿದ್ದು 11 ಜನ ಸಾವು

ಶಿಪ್ ಯಾರ್ಡ್ ಉದ್ಯೋಗಿಗಳ ಮೇಲೆ ಬಿದ್ದ 70 ಟನ್ ತೂಕದ ಕ್ರೇನ್

ಪ್ರಗತಿವಾಹಿನಿ ಸುದ್ದಿ; ವಿಶಾಖಪಟ್ಟಣಂ: ಬೃಹತ್ ಕ್ರೇನ್​ ಕುಸಿದುಬಿದ್ದು 11 ಮಂದಿ ಸಾವನ್ನಪ್ಪಿರುವ ದುರಂತ ಘಟನೆ ಆಂಧ್ರದ ವಿಶಾಖಪಟ್ಟಣಂನಲ್ಲಿರುವ ಹಿಂದೂಸ್ತಾನ್ ಶಿಪ್​ಯಾರ್ಡ್ ಬಳಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದಾರೆ.

ವಿಶಾಖಪಟ್ಟಣಂನ ಬಂದರಿನಲ್ಲಿರುವ ಹಿಂದೂಸ್ಥಾನ್ ಶಿಪ್​ಯಾರ್ಡ್ ಸಂಸ್ಥೆಯ ಹಡಗುದಾಣದಲ್ಲಿ ನೂತನ ಕ್ರೇನ್ ಸ್ಥಾಪಿಸುವ ವೇಳೆ ಈ ಘಟನೆ ಸಂಭವಿಸಿದ್ದು, ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

ನಾಲ್ಕು ಮೃತ ದೇಹಗಳನ್ನ ಸದ್ಯ ಹೊರತೆಗೆಯಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಮೃತಪಟ್ಟವರಲ್ಲಿ ನಾಲ್ವರು ಹಿಂದೂಸ್ಥಾನ್ ಶಿಪ್​ಯಾರ್ಡ್ ಸಂಸ್ಥೆಯ ಉದ್ಯೋಗಿಗಳಾಗಿದ್ದರೆ, ಇನ್ನುಳಿದವರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾಗಿದ್ದಾರೆ. ಅನುಪಮ್ ಹೆಸರಿನ ಈ ಕ್ರೇನ್ ಬರೋಬ್ಬರಿ 70 ಟನ್ ತೂಕ ಇದೆ.