P.V.Hegde Add

ಭೂ ಸುಧಾರಣೆ ತಿದ್ದುಪಡಿ ಕಾಯಿದೆಗೆ ವಿರೋಧ; ಮಸೂದೆ ಪ್ರತಿ ಹರಿದು ಕಾಂಗ್ರೆಸ್ ಆಕ್ರೋಶ

ಇದು ರೈತರ ಮರಣ ಶಾಸನ ಎಂದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಸರ್ಕಾರ ಮಂಡಿಸಿರುವ ಭೂ ಸುಧಾರಣಾ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿರುವ ಕಾಂಗ್ರೆಸ್ ಸದಸ್ಯರು ಮಸೂದೆ ಪ್ರತಿಯನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೂ ಸುಧಾರಣಾ ಮಸೂದೆ ಕುರಿತು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದು ರೈತರ ಪಾಲಿನ ಮರಣ ಶಾಸನ. ಕಾರ್ಪೋರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಸರ್ಕಾರ ಆತುರದಲ್ಲಿ ಮಸೂದೆ ಮಂಡನೆ ಮಾಡಿದೆ ಎಂದು ಕಿಡಿಕಾರಿದರು.

ರೈತರು, ಕಾರ್ಮಿಕರು, ವಿಪಕ್ಷಗಳ ಜೊತೆಯೂ ಯಾವುದೇ ಚರ್ಚೆ ನಡೆಸದೇ ಭೂಸುಧಾರಣಾ ಕಾಯ್ದೆ 1961ಕ್ಕೆ ತಿದ್ದುಪಡಿ ತರಲಾಗಿದೆ. ಈ ಮೂಲಕ ಸರ್ಕಾರ ರೈತರನ್ನು ಸರ್ವನಾಶ ಮಾಡಲು ಹೊರಟಿದೆ. ಅಲ್ಲದೇ ಕ್ಯಾಬಿನೇಟ್ ನಿರ್ಧಾರ ಕೈಗೊಂಡಾಗಲೇ ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೆವು. ರೈತ ಹಿತ ದೃಷ್ಟಿಯಿಂದ ಕಾನುನಾಗಿ ಜಾರಿಯಾಗಲು ಬಿಡುವುದಿಲ್ಲ ಎಂದರು.

ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಭೂಸುಧಾರಣೆಯ ಆತ್ಮವನ್ನು ಕಿತ್ತು ಹಾಕಿದ್ದಾರೆ. ಗಣಿದಾರರಿಗೆ ರಕ್ಷಣೆ ನಿಡಿ, ಅವರನ್ನು ಕೃಷಿ ಭೂಮಿ ಮಾಲೀಕರನ್ನಾಗಿ ಮಾಡುವ ಉದ್ದೇಶ ಸರ್ಕಾರದ್ದು, ಜನ ಒಪ್ಪದಿದ್ದರೂ ಇದನ್ನು ಕಾನೂನು ಮಾಡಲು ಮುಂದಾಗಿರುವ ಸರ್ಕಾರದ ನಡೆ ಖಂಡನೀಯ ಎಂದು ಹೇಳಿದರು.

ವಿಪಕ್ಷ ನಾಯಕನ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆಯೇ ರೊಚ್ಚಿಗೆದ್ದ ಸಿದ್ದರಾಮಯ್ಯ ಮಸೂದೆ ಪ್ರತಿಯನ್ನು ಹರಿದು ಹಾಕಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕೂಡ ಮಸೂದೆ ಪ್ರತಿ ಹರಿದು ಕಿಡಿಕಾರಿದರು. ಬಳಿಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಲಕ್ಷ್ಮಿ ಹೆಬ್ಬಾಳಕರ್, ಅಜಯ್ ಸಿಂಗ್, ಪ್ರಿಯಾಂಕ ಖರ್ಗೆ,  ಯತೀಂದ್ರರವರು,  ಅಂಜಲಿ ನಿಂಬಾಳ್ಕರ, ಸೌಮ್ಯ ರೆಡ್ಡಿ, ಕನಿಜ ಫಾತೀಮ, ವನಿಷಾ ಮುಂತಾದವರು ಉಪಸ್ಥಿತರಿದ್ದರು.