Kannada NewsLatest

ಬಹಿರಂಗ ಭಾಷಣದಲ್ಲಿ ನನ್ನನ್ನು ಪ್ರಶಂಸಿಸಿದ್ದರು ಸುರೇಶ ಅಂಗಡಿ – ವಿಧಾನಸಭೆಯಲ್ಲಿ ಸ್ಮರಿಸಿದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರನ್ನು ನಾನು ಬಹಳ ಹತ್ತಿರದಿಂದ ಕಂಡಿದ್ದೇನೆ. ಅವರ ನಿಧನದಿಂದ ಬೆಳಗಾವಿ ಲೋಕಸಭಾ ಕ್ಷೇತ್ರ ಬಡವಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸ್ಮರಿಸಿದ್ದಾರೆ.

ವಿಧಾನಸಭೆಯಲ್ಲಿ ಗುರುವಾರ ಸುರೇಶ ಅಂಗಡಿಯವರಿಗೆ ಶೃದ್ಧಾಂಜಲಿ ಸಲ್ಲಿಸುವ ವೇಳೆ ಮಾತನಾಡಿದ ಹೆಬ್ಬಾಳಕರ್, ಲೋಕಸಭಾ ಚುನಾವಣೆಯಲ್ಲಿ ಸುರೇಶ ಅಂಗಡಿ ವಿರುದ್ಧ ಸ್ಪರ್ಧಿಸಿದ್ದ ಸಂದರ್ಭವನ್ನು ನೆನಪಿಸಿಕೊಂಡರು. ಆ ಸಂದರ್ಭದಲ್ಲಿ ನಾವು ಸಭ್ಯತೆಯನ್ನು ಮೀರದೆ ಪ್ರಚಾರ ಮಾಡಿದ್ದೆವು. ಎಲ್ಲಿಯೂ ಲಕ್ಷ್ಮಣ ರೇಖೆಯನ್ನು ದಾಟಿ ಮಾತಾಡಲಿಲ್ಲ. ಅತ್ಯಂತ ಸರಳ, ಸಜ್ಜನಿಕೆಯ, ಸಂಸ್ಕೃತಿ ಹೊಂದಿದ ಸುರೇಶ ಅಂಗಡಿ ಅವರನ್ನು ಕಳೆದುಕೊಂಡು ಬಡವರಾಗಿದ್ದೇವೆ ಎಂದು ಭಾವುಕರಾದರು.

ಆಗಸ್ಟ್ 23ರಂದು ನನ್ನ ಕ್ಷೇತ್ರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದರು. ಇಂತಹ ಒಳ್ಳೆಯ ಶಾಸಕಿಯನ್ನು ಪಡೆದ ನೀವು ಭಾಗ್ಯಶಾಲಿಗಳು ಎಂದು ಬಹಿರಂಗ ಭಾಷಣದಲ್ಲಿ ಹೇಳಿದ್ದರು. ಒಳ್ಳೆಯವರನ್ನು ಒಳ್ಳೆಯವರು ಎಂದು ಹೇಳುವ ಧೈರ್ಯವನ್ನು ಅವರು ಹೊಂದಿದ್ದರು ಎಂದೂ ಲಕ್ಷ್ಮಿ ಹೆಬ್ಬಾಳಕರ್ ಸ್ಮರಿಸಿದರು.

ಸುರೇಶ ಅಂಗಡಿ ಅವರ ತಾಯಿ ಹಾಗೂ ಪೂರ್ಣ ಕುಟುಂಬದೊಂದಿಗೆ ನನಗೆ ಉತ್ತಮ ಸಂಬಂಧವಿದೆ. 4 ದಿನದ ಹಿಂದೆ ಅವರ ಆರೋಗ್ಯ ಹದಗೆಟ್ಟ ಬಗ್ಗೆ ತಿಳಿದಾಗ ಅವರ ಪತ್ನಿ ಹಾಗೂ ಆಪ್ತ ಸಹಾಯಕರೊಂದಿಗೆ ವಿಚಾರಿಸಿದ್ದೆ. ಹುಷಾರಾಗಿ ಬರುತ್ತಾರೆ ಎಂದು ಹೇಳಿದ್ದರು. 82 ವರ್ಷದ ಅವರ ತಾಯಿಯವರನ್ನು ಆಗಾಗ ಭೇಟಿಯಾಗಿ ಆರೋಗ್ಯ ವಿಚಾರಿಸುತ್ತಿರುತ್ತೇನೆ. ಸುರೇಶ ಅಂಗಡಿ ಅವರನ್ನು ನೋಡಿ ಬಹಳಷ್ಟು ಕಲಿತಿದ್ದೇನೆ. ಅವರಿಂದ ಸಮಾಧಾನವನ್ನು ಕಲಿತಿದ್ದೇನೆ ಎಂದು ಅವರು ಹೇಳಿದರು.

4ನೇ ಬಾರಿಗೆ ಸಂಸದರಾಗಿ,  ಕೇಂದ್ರದ ಸಚಿವರಾಗಿ ಹಲವಾರು ಕೆಲಸ ಮಾಡಿದ್ದರು. ಬೆಳಗಾವಿಗೆ ಸ್ಮಾರ್ಟ್ ಸಿಟಿ ಯೋಜನೆ ತರುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದರು. ನನಗೆ ಎಲ್ಲ ರೀತಿಯಿಂದ ಸಹಕಾರ, ಮಾರ್ಗದರ್ಶನ ಮಾಡುತ್ತಿದ್ದರು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕೊಡಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button