ಪ್ರಗತಿವಾಹಿನಿ ಸುದ್ದಿ, ಬೆಳಗಾವಿ - ಕೊರೋನಾ ತಂದಿಟ್ಟಿರುವ ಸಂಕಷ್ಟ ಎಂತಾದ್ದು ಎನ್ನುವುದು ಜನಸಾಮಾನ್ಯರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರಿಗೂ ಅನುಭವಕ್ಕೆ ಬಂದಿದೆ. ಪ್ರತಿಯೊಬ್ಬರೂ ಈ ಕಷ್ಟಕಾಲದಲ್ಲಿ ಕೈ ಹಿಡಿಯುವವರ್ಯಾರು ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಇಂತಹ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತನ್ನ ಪೂರ್ಣ ಪರಿವಾರದೊಂದಿಗೆ ಜನರ ಮಧ್ಯದಲ್ಲಿದ್ದಾರೆ. ಜನರ ಸಂಕಷ್ಟದಲ್ಲಿ ಭಾಗಿಯಾಗಿದ್ದಾರೆ. ಸಹೋದರ, ಮಗ ಮತ್ತು ಹಲವಾರು ಪ್ರಮುಖ ಕಾರ್ಯಕರ್ತರೊಂದಿಗೆ ಜನರಿಗೆ ಜಾಗ್ರತಿ ಮೂಡಿಸುವ, ವಿವಿಧ ಸಾಮಗ್ರಿ ವಿತರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಒಂದಿಬ್ಬರನ್ನು ಬಿಟ್ಟರೆ ಬಹುತೇಕ ಶಾಸಕರು ಕೊರೋನಾ ಸಂಕಷ್ಟದಲ್ಲಿ ಜನರಿಗೆ ಸಹಾಯ ಮಾಡಲು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜನಜಾಗೃತಿ ಅಭಿಯಾನ, ಅಧಿಕಾರಿಗಳ ಸಭೆ, ವಿವಿಧ ಸಾಮಗ್ರಿ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಆದರೆ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಾವಷ್ಟೇ ಅಲ್ಲದೆ ತಮ್ಮ ಪೂರ್ಣ ಪರಿವಾರವನ್ನು ಕೊರೋನಾ ಸಮಸ್ಯೆಯಿಂದ ಜನರನ್ನು ಸಾಧ್ಯವಾದಷ್ಟು ಪಾರು ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಲಕ್ಷ್ಮಿ ಹೆಬ್ಬಾಳಕರ್ ಈಗಾಗಲೆ ಹಲವು ಸುತ್ತಿನಲ್ಲಿ ಅಧಿಕಾರಿಗಳೊಂದಿಗ ಸಭೆ ನಡೆಸಿದ್ದಾರೆ. ಪ್ರತಿ ಗ್ರಾಮಕ್ಕೆ ತೆರಳಿ ಜನಜಾಗ್ರತಿ ಮಾಡುತ್ತಿದ್ದಾರೆ. ಔಷಧ ಸಿಂಪಡಿಸುತ್ತಿದ್ದಾರೆ. ಮಾಸ್ಕ್, ಕಿರಾಣಿ ಸಾಮಗ್ರಿ, ಸೆನಿಟೈಸರ್, ಹಾಲು ಮೊದಲಾದ ಸಾಮಗ್ರಿಗಳನ್ನು ಹಂಚುತ್ತಿದ್ದಾರೆ. ಕ್ಷೇತ್ರದ ಜನರು ನನ್ನ ಮನೆ ಬಾಗಿಲಿಗೆ ಬರುವುದು ಬೇಡ, ನಾನೇ ನೀವಿದ್ದಲ್ಲಿಗೆ ಬರುತ್ತೇನೆ ಎಂದು ಪ್ರತಿ ನಿತ್ಯ ಹಳ್ಳಿಗಳಿಗೆ ತೆರಳುತ್ತಿದ್ದಾರೆ. ಸಹೋದರ ಚನ್ನರಾಜ ಹಟ್ಟಿಹೊಳಿ, ಮಗ ಮೃಣಾಲ್ ಹೆಬ್ಬಾಳಕರ್ ಕೂಡ ಮನೆಯಲ್ಲಿ ಕೂಡ್ರದೆ ಗ್ರಾಮಗಳಿಗೆ ತೆರಳಿ ಸಾಮಗ್ರಿಗಳ ವಿತರಣೆಯಲ್ಲಿ ನಿರತರಾಗಿದ್ದಾರೆ.
ಇಂದು ಹಲವೆಡೆ ಸಾಮಗ್ರಿ ವಿತರಣೆ
ಇವತ್ತು ಬೆಳಗಿನ ಜಾವ ಹಿರೇಬಾಗೇವಾಡಿ, ಕಮಕಾರಟ್ಟಿ, ಕೋಳಿಕೊಪ್ಪ, ಕೊಂಡಸಕೊಪ್ಪ, ಶೆಗನಮಟ್ಟಿ ಗ್ರಾಮಗಳಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕೊರೊನಾ ವೈರಸ್ (COVID19) ಬಗ್ಗೆ ಜನಜಾಗೃತಿ ಅಭಿಯಾನ ಕೈಗೊಂಡರು.
ಜೊತೆಗೆ ಗ್ರಾಮದಲ್ಲಿ ಕೆಮಿಕಲ್ ಭರಿತ ಔಷಧವನ್ನು ಸಿಂಪರಣೆ ಮಾಡಿ, ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಜನರಿಗೆ ಮಾಸ್ಕ್, ಸ್ಯಾನಿಟೈಸರ್ ಗಳನ್ನು ವಿತರಿಸಿದರು. ಜನರಿಗೆ ಸಾಮಾಜಿಕ ಅಂತರ ಹಾಗೂ ಕುಟುಂಬಸ್ಥರ ಆರೋಗ್ಯವನ್ನು ಕಾಪಾಡಿಕೊಳ್ಳಲು ಮನವಿಯನ್ನು ಮಾಡಿದರು. ಲಾಕ್ ಡೌನ್ ನಿಯಮಗಳನ್ನು ಉಲ್ಲಂಘನೆ ಮಾಡದೆ ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ವಿನಂತಿಸಿದರು.
ಸಾಂಬ್ರಾ ಗ್ರಾಮದಲ್ಲಿ ಶಾಸಕಿಯ ಸಹೋದರ ಚನ್ನರಾಜ ಹಟ್ಟಿಹೊಳಿ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಸೇರಿ ಕೊರೊನಾ ವೈರಸ್ (COVID19) ಬಗ್ಗೆ ಜನಜಾಗೃತಿ ಅಭಿಯಾನವನ್ನು ಮೂಡಿಸಿ, ಮುಂಜಾಗ್ರತೆಯ ಕ್ರಮಗಳನ್ನು ತಿಳಿಸುವುದರೊಂದಿಗೆ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ವಿತರಣೆ ಮಾಡಿದರು, ಜೊತೆಗೆ ಕೆಮಿಕಲ್ ಭರಿತ ಔಷಧವನ್ನು ಸಿಂಪಡಣೆಯನ್ನು ಕೂಡ ಮಾಡಲಾಯಿತು.
ಯುವರಾಜಣ್ಣಾ ಕದಂ, ಲಕ್ಷ್ಮಿ ಹೆಬ್ಬಾಳಕರ್ ಪುತ್ರ ಮೃಣಾಲ ಹೆಬ್ಬಾಳಕರ ಹಾಗೂ ಪಕ್ಷದ ಕಾರ್ಯಕರ್ತರು ಸೇರಿ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಕ್ಷೇತ್ರದ ಜ್ಯೋತಿ ನಗರ, ಗಣೇಶಪುರ ಈ ಪ್ರದೇಶಗಳಲ್ಲಿ ಕೂಲಿ ಕಾರ್ಮಿಕರಿಗೆ, ಬಡ ಜನತೆಗೆ ಹಾಲಿನ ಪ್ಯಾಕೇಟ್ ಗಳನ್ನು ವಿತರಿಸಿ ಕೊರೊನ ವೈರಸ್ ಬಗ್ಗೆ ಜನಜಾಗೃತಿ ಅಭಿಯಾನವನ್ನು ಕೈಗೊಂಡು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಬಗ್ಗೆ ತಿಳಿಸಿ ಹೇಳಿದರು.
ಇದರ ಜೊತೆಗೆ ಸಾವಗಾಂವ, ಬೆನ್ನಳ್ಳಿ ಹಾಗೂ ಹಂಗರಗಾ ಗ್ರಾಮಗಳಲ್ಲಿಯೂ ಕೂಡ ಕೊರೊನಾ ವೈರಸ್ ಬಗ್ಗೆ ಜನಜಾಗೃತಿ ಅಭಿಯಾನವನ್ನು ಕೈಗೊಂಡು ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಾಟಲ್ ಗಳನ್ನು ವಿತರಣೆ ಮಾಡಿದರು.
ನಿನ್ನೆ ನಿಲಜಿ, ಮುತಗಾ ಸೇರಿದಂತೆ ಹಲವಾರು ಹಳ್ಳಿಗಳಲ್ಲಿ ಜನರಿಗೆ ಕಿರಾಣಿ ಸಾಮಗ್ರಿಗಳನ್ನು ವಿತರಿಸಲಾಗಿದೆ. ಶಾಸಕರೊಬ್ಬರು ಇಡೀ ಪರಿವಾರದೊಂದಿಗೆ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ತೊಡಗಿಕೊಂಡಿರುವುದು ಅಪರೂಪವಾಗಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ