Kannada NewsKarnataka NewsLatest

*ಲೀಲಾವತಿ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಿರಿಯ ನಟಿ ಡಾ.ಲೀಲಾವತಿ (82) ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಅವರ ಅಂತಿಮ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟಿರುವ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಕನ್ನಡ ಚಿತ್ರರಂಗದ ಕಲಾವಿದರು, ರಾಜಕೀಯ ಗಣ್ಯರು ಪಡೆದು, ಅಂತಿಮ ನಮನ ಸಲ್ಲಿಸಿದರು.

ರವೀಂದ್ರಕಲಾ ಕ್ಷೇತ್ರಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ವಿ.ಸೋಮಣ್ಣ ಮೊದಲಾದವರು ಲೀಲಾವತಿ ಅವರ ಅಂತಿಮ ದರ್ಶನ ಪಡೆದರು.

ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲೀಲಾವತಿ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರು ಕನ್ನಡ ಮಾತ್ರವಲ್ಲ, ತೆಲುಗು, ತಮಿಳು ಸೇರಿದಂತೆ ಬಹುಭಾಷಾ ನಟಿಯಾಗಿದ್ದರು. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಅವರ ಹಲವು ಚಿತ್ರಗಳನ್ನು ನೋಡಿದ್ದೆ. ಡಾ.ರಾಜ್ ಕುಮಾರ್ ಹಾಗೂ ಲೀಲಾವತಿ ಅವರ ಜೋಡಿ ಜನಪ್ರಿಯ ಜೋಡಿಯಾಗಿತ್ತು. ಹಲವಾರು ಹಿಟ್ ಚಿತ್ರಗಳನ್ನು ಲೀಲಾವತಿ ನೀಡಿದ್ದರು. ನಾಯಕ ನಟಿಯಾಗಿ ಮಾತ್ರವಲ್ಲ ಪೋಷಕ ಪಾತ್ರ ಸೇರಿದಂತೆ ಯಾವುದೇ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸುತ್ತಿದ್ದರು. ರಂಗಭೂಮಿ ಕಲಾವಿದೆಯಾಗಿ ಬಂದವವರು ಚಿತ್ರರಂಗದಲ್ಲಿ ಹಲವು ಕೊಡುಗೆ ನೀಡಿದ್ದರು. ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದರು. ಪ್ರಮುಖವಾಗಿ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಅಗಲಿಕೆ ದು:ಖ ತಂದಿದೆ ಎಂದರು.

ಲೀಲಾವತಿ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸುವಂತೆ ಆದೇಶ ನೀಡಿದ್ದೇನೆ. ಇಂದು ಸಂಜೆ ಸೋಲದೇವನಹಳ್ಳಿಯಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button