ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ರಿಂಗ್ ರಸ್ತೆಗೆ ಈ ಬಾರಿಯ ಬಜೆಟ್ ನಲ್ಲಿ 140 ಕೋಟಿ ರೂ. ತೆಗೆದಿರಿಸಿರುವುದು ಶಾಸಕ ಅಭಯ ಪಾಟೀಲ ಅವರ ಪ್ರಸ್ತಾವನೆಯ ಅನ್ವಯ ಎಂದು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಈ ಕುರಿತು ಶಾಸಕ ಅಭಯ ಪಾಟೀಲ ಸಚಿವರಿಂದ ವಿಧಾನಸಭೆಯಲ್ಲಿ ಲಿಖಿತ ಉತ್ತರ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಬೆಳಗಾವಿ ದಕ್ಷಿಣ ಅಧ್ಯಕ್ಷೆ ಗೀತಾ ಸುತಾರ್, ಕೆಲವರು ರಿಂಗ್ ರಸ್ತೆಗೆ ತಾವೇ ಹಣ ಬಿಡುಗಡೆ ಮಾಡಿಸಿರುವುದಾಗಿ ಪ್ರಚಾರ ಪಡೆಯುತ್ತಿದ್ದಾರೆ. ಇದನ್ನು ಮುಂದುವರಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅವರ ಹೇಳಿಕೆಯ ಪೂರ್ಣ ವಿವರ ಹೀಗಿದೆ –
“ಇತ್ತೀಚೆಗೆ ರಾಜ್ಯ ಸರಕಾರ ಮಂಡಿಸಿದ ಬಜೆಟ್ ಘೋಷಣೆಯಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಝಾಡಶಹಾಪೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4ಎ ದಿಂದ ಬೆನ್ನಾಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4 ರ ವರೆಗಿನ ರಿಂಗ್ ರಸ್ತೆ ನಿರ್ಮಾಣ ಮಾಡಲು ರಾಜ್ಯ ಸರಕಾರದ ವಂತಿಗೆ ಹಣ ಶೇ 50% ರಷ್ಟು ಅಂದರೆ ರೂ. 140 ಕೋಟಿ ರೂಪಾಯಿಗಳನ್ನು ಶಾಸಕ ಅಭಯ ಪಾಟೀಲ ಅವರ ಪ್ರಸ್ತಾವನೆ ಮೇಲೆ ಬಿಡುಗಡೆಯಾಗಿದ್ದರೂ ಸಹ ಕೆಲವೊಂದು ಜನರು ಅದನ್ನು ನಾವೆ ಬಿಡುಗಡೆ ಮಾಡಿಸಿರುವುದಾಗಿ ಹೇಳಿಕೊಂಡು ಪತ್ರಿಕೆಗಳಲ್ಲಿ ಹಾಗೂ ಸೋಷಿಯಲ್ ಮಿಡಿಯಾದಲ್ಲಿ ಪ್ರಚಾರವನ್ನು ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಯಾರ ಪ್ರಸ್ತಾವನೆ ಮೇಲೆ ಅದನ್ನು ಪರಿಗಣಿಸಲಾಗಿದೆ ಎಂದು ವಿಧಾನಸಭೆಯಲ್ಲಿ ಶಾಸಕರು ಪ್ರಶ್ನೆ ಕೇಳಿರುವುದಕ್ಕೆ ಸಂಬಂಧಪಟ್ಟ ಸಚಿವರು ಉತ್ತರವನ್ನು ನೀಡಿದ್ದಾರೆ. ಅದಕ್ಕೆ ಸಂಬಂದಿಸಿದ ಉತ್ತರ ಪ್ರತಿಯನ್ನು ಇದರೊಂದಿಗೆ ಲಗತ್ತಿಸಲಾಗಿದೆ. ದಯವಿಟ್ಟು ಈ ಪ್ರಸ್ತಾವನೆಯನ್ನು ನಾವು ಮಾಡಿದ್ದೇವೆ ಅಂದುಕೊಂಡು ತಿರಾಗಾಡುತ್ತಿರುವ ಜನರಿಗೆ ನಾವು ಚರ್ಚೆಗೆ ಆಹ್ವಾನ ಮಾಡುತ್ತೇವೆ. ಈ ರೀತಿ ಸುಳ್ಳನ್ನು ಹೇಳಿ, ಶಾಸಕ ಅಭಯ ಪಾಟೀಲ ರವರು ಮಾಡಿರುವ ಕೆಲಸದ ಕ್ರೆಡಿಟ್ ತಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಕಾನೂನು ಪ್ರಕಾರ ಅವರ ಮೇಲೆ ಕ್ರಮಕೈಕೊಳ್ಳಬೇಕಾಗುತ್ತದೆ. ಅಲ್ಲದೇ ಜನರನ್ನು ತಪ್ಪು ದಾರಿಗೆ ತರುವಂತ ಕೆಲಸವನ್ನು ಮಾಡಬಾರದು. ಶಾಸಕರ ಹಕ್ಕುಚ್ಯುತಿಯನ್ನ ಮಾಡಬಾರದು. ತಮಗೆ ಸಂಬಂದವಿಲ್ಲದ ಕೆಲಸವನ್ನು ತಾವು ಮಾಡಿದ್ದೆವೆಂದು ಹೇಳಿಕೊಂಡು ಹೋಗುವುದು ಶೋಭೆ ತರುವಂತದ್ದಲ್ಲ”
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ