
ಎಲ್ಲಾ ರಾಜ್ಯಗಳಲ್ಲಿ ಜಿಲ್ಲಾ ಖನಿಜ ನಿಧಿ ಸ್ಥಾಪನೆ
ಪ್ರಗತಿವಾಹಿನಿ ಸುದ್ದಿ: ಲೋಕಸಭೆ ಅಧಿವೇಶನದಲ್ಲಿ ಇಂದು ಯುಪಿಎ ಅವಧಿಯಲ್ಲಿನ ಕಲ್ಲಿದ್ದಲು ಹಗರಣ ಪ್ರತಿಧ್ವನಿಸಿತು ಎಂದು ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಟ್ವೀಟ್ ಮಾಡಿದ್ದಾರೆ.
ಅಧಿವೇಶನದಲ್ಲಿ ಇಂದು ಭಾರತೀಯ ಆರ್ಥಿಕತೆಯ ಶ್ವೇತಪತ್ರದ ಮೇಲಿನ ಚರ್ಚೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯುಪಿಎ ಅವಧಿಯಲ್ಲಿ ನಡೆದ ಕಲ್ಲಿದ್ದಲು ಹಗರಣದ ಸಂಪೂರ್ಣ ವೃತ್ತಾಂತವನ್ನು ತೆರೆದಿಟ್ಟರು.
ಯುಪಿಎ ಸರ್ಕಾರದಲ್ಲಿ ಕಲ್ಲಿದ್ದಲು ಗಣಿ ನಿಕ್ಷೇಪಗಳನ್ನು ಅಸಮರ್ಪಕವಾಗಿ ಹಂಚಿಕೆ ಮಾಡಲಾಗಿತ್ತು ಎಂಬುದನ್ನು ಪ್ರಸ್ತಾಪಿಸಿದ ವಿತ್ತ ಸಚಿವೆ, ಹಳಿ ತಪ್ಪಿದ್ದ ಕಲ್ಲಿದ್ದಲು ಗಣಗಾರಿಕೆಯನ್ನು NDA ಅಧಿಕಾರಕ್ಕೆ ಬಂದ ಮೇಲೆ ಸುವ್ಯವಸ್ಥೆಗೆ ತರಲಾಯಿತು ಎಂದು ಸದನದ ಗಮನ ಸೆಳೆದರು.
ಜಿಲ್ಲಾ ಖನಿಜ ನಿಧಿ ಸ್ಥಾಪನೆ: ಗಣಿಗಾರಿಕೆಯಿಂದ ಹಾನಿಗೊಳಗಾದ ಜಿಲ್ಲೆಗಳ ಅಭಿವೃದ್ಧಿಗೆ ಕಾನೂನು ರೂಪಿಸುವ ಮೂಲಕ NDA ಸರ್ಕಾರ ಜಿಲ್ಲಾ ಖನಿಜ ನಿಧಿಯನ್ನು ಸ್ಥಾಪಿಸಿದೆ ಎಂದು ತಿಳಿಸಿದರು.
ಜಿಲ್ಲಾ ಖನಿಜ ನಿಧಿಗಾಗಿ ಎಲ್ಲಾ ರಾಜ್ಯಗಳಲ್ಲಿ 84,900 ಕೋಟಿ ರೂ.ಗಿಂತ ಹೆಚ್ಚಿನ ಹಣವನ್ನು ಡಿಎಂಎಫ್‌ನಲ್ಲಿ ಠೇವಣಿ ಮಾಡಲಾಗಿದೆ. ಈ ನಿಧಿಯಿಂದ ಈಗ ಗಣಿಗಾರಿಕೆಯಿಂದ ಹಾನಿ ಪೀಡಿತ ಜಿಲ್ಲೆಗಳಲ್ಲಿ ತ್ವರಿತ ಅಭಿವೃದ್ಧಿ ನಡೆಯುತ್ತಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ದೇಶದ ಕಲ್ಲಿದ್ದಲು ಉತ್ಪಾದನೆ ದುಪ್ಪಟ್ಟು: 2013-14ರಲ್ಲಿ ದೇಶದ ಕಲ್ಲಿದ್ದಲು ಉತ್ಪಾದನೆ ಕೇವಲ 567 ದಶಲಕ್ಷ ಟನ್‌ಗಳಷ್ಟಿತ್ತು, 2022-23ರಲ್ಲಿ ಅದನ್ನು 900 ದಶಲಕ್ಷ ಟನ್‌ಗೆ ಹೆಚ್ಚಿಸಿದ್ದೇವೆ. ಮತ್ತು 2023-24ರಲ್ಲಿ 1 ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸಲಿದ್ದೇವೆ ಎಂದು ವಿತ್ತ ಸಚಿವೆ ಘಂಟಾ ಘೋಷವಾಗಿ ಹೇಳಿದ್ದಾರೆ.
ವಿದೇಶಿ ವಿನಿಮಯ ಉಳಿತಾಯ: ಭಾರತ ಕಲ್ಲಿದ್ದಲು ಉತ್ಪಾದನೆಯಲ್ಲಿ ಸ್ವಾವಲಂಬಿ ಸಾಧನೆಯಿಂದಾಗಿ ದೇಶದ ಕಲ್ಲಿದ್ದಲು ಆಮದು ಕಡಿಮೆಯಾಗಿದೆ ಮತ್ತು ಅಪಾರ ಪ್ರಮಾಣದ ವಿದೇಶಿ ವಿನಿಮಯ ಸಹ ಉಳಿತಾಯವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ