ಪೂರ್ಣಿಮಾ ಹೆಗಡೆ
ಹುಟ್ಟು ಆಯ್ಕೆಯಲ್ಲ. ಅದು ಆಯ್ಕೆಯಾಗಿದ್ದರೆ ಯಾರೂ ಬಡತನದಲ್ಲಿ ಹುಟ್ಟುತ್ತಲೇ ಇರಲಿಲ್ಲ. ಬಡತನ ಶಾಪವಾಗುತ್ತಿರಲಿಲ್ಲ. ಬಡತನದ ಹುಟ್ಟು ಆಯ್ಕೆಯಾಗಲೀ ಬಿಡಲಿ, ಹುಟ್ಟಿದಮೇಲೆ ಜೀವನ ನಡೆಸಲೇ ಬೇಕಲ್ಲ. “ಹುಟ್ಟಿಸಿದವ ಹುಲ್ಲು ಮೇಯಿಸುವ” ಅಂತ ಕುಳಿತರೆ ಹೊಟ್ಟೆ ತುಂಬಲಾರದು. ಹೊಟ್ಟೆಪಾಡು ಹುಡುಕಲೇ ಬೇಕು. ಹೊಟ್ಟೆ ಹೊರೆದುಕೊಳ್ಳಲು ಹೊರಟವರ ಅಸಹಾಯಕತೆಯ ದುರುಪಯೋಗ ಮಾಡಿಕೊಂಡೇ ಹೊಟ್ಟೆ ತುಂಬಿಸುವಾತ ಹಿಟ್ಟು ನೀಡುವುದು, ಅದೇ ಶೋಷಣೆ. ಅದರಲ್ಲೂ ಹೊಟ್ಟೆ ಹೊರಿದು ಕೊಳ್ಳುವ ಪಾಡು ಬಾಲ್ಯದಲ್ಲಿಯೇ ಬಂದರಂತೂ ಮುಗಿದೇ ಹೋಯಿತು. ಬಾಲ್ಯದ ಅಸಹಾಯಕತೆಯನ್ನೇ ದುಡಿಸಿಕೊಂಡು ಗುಟುಕು ಅಂಬಲಿ ನೀಡಲಾಗುವುದು. ಬಾಲಕಾರ್ಮಿಕ ಪದ್ದತಿಯನ್ನ ವಿರೋಧಿಸಿ ಅನೇಕ ಕಾನೂನುಗಳು ಬಂದಿವೆ. ಮತ್ತು ಬರುತ್ತಲಿವೆ. ತಿಳಿದೋ ತಿಳಿಯದೆಯೋ ಬಾಲಕಾರ್ಮಿಕ ಪದ್ದತಿ ಮುಂದುವರಿಯುತ್ತಲೇ ಇವೆ. ಇದರಲ್ಲಿ ಕೆಲವು ಅಸಹಾಯಕತೆ, ಕೆಲವು ಅನಿವಾರ್ಯತೆ, ಕೆಲವು ದುರುಪಯೋಗ, ಕೆಲವು ದುರಾಸೆ .ಕಾರಣ ಯಾವುದೇ ಇರಲಿ ಶೋಷಣೆಗೆ ಒಳಗಾಗುವವ ಬಾಲ್ಯವನ್ನೇ ಬಲಿಕೊಟ್ಟ ಬಾಲಕ.
ಕೈಗಾರಿಕಾ ಕ್ರಾಂತಿ ವಿಶ್ವದಾದ್ಯಂತ ರಭಸದಿಂದ ನಡೆಯುತ್ತಿರುವಾಗ, ಸುಮಾರು ನಾಲ್ಕು ವರ್ಷದ ಮಕ್ಕಳನ್ನೂ ಸಹ ಕಾರ್ಖಾನೆಗಳಲ್ಲಿ ಅಪಾಯಕಾರಿ ಹಾಗೂ ಮಾರಕ ದುಡಿಮೆಗಳಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಚಿಮಣಿಗಳನ್ನ ಶುದ್ದೀಕರಿಸಲು, ಯಂತ್ರಗಳ ಕೆಳಗಡೆ ನುಗ್ಗಿಹತ್ತಿಯ ಉಂಡೆಗಳನ್ನು ತರಲು, ಕಲ್ಲಿದ್ದಲು ಗಣಿಗಳಲ್ಲಿ ವಯಸ್ಕರಿಗೆ ತೆವಳಿ ಹೋಗಲು ಸಾದ್ಯವಾಗದ ಸುರಂಗಗಳಲ್ಲಿ ಮಕ್ಕಳನ್ನ ಕಳಿಸುವದು, ಸಂದೇಶ ರವಾನೆಗೆ, ಕಸಗುಡಿಸಲು, ಬೂಟ್ ಪಾಲಿಶ್ ಮಾಡಲು, ಸಣ್ಣಪುಟ್ಟ ಸರಕು ಮಾರಾಟ ಮಾಡಲು, ಎಲ್ಲಕ್ಕಿಂತ ಮಿಗಿಲಾಗಿ ವೇಶ್ಯಾವಾಟಿಕೆಗೆ ಕೂಡ ಮಕ್ಕಳನ್ನೇ ಬಳಸಿಕೊಳ್ಳಲಾಗುತ್ತಿತ್ತು.
ಬಾಲ ಕಾರ್ಮಿಕ ಪದ್ದತಿಗೆ ಮೂಲ ಮತ್ತು ಪ್ರಮುಖ ಕಾರಣ ಆಗಲೇ ಹೇಳಿದಂತೆ ಬಡತನ. ಚಿಕ್ಕವಯಸ್ಸಿಗೆ ಅನಾಥರಾದವರು ಬೀದಿಗಳಲ್ಲಿ, ಹೋಟೆಲ್ಗಳಲ್ಲಿ ದುಡಿಯುವುದು. ಹೊಟ್ಟೆ ಹೊರೆಯಬೇಕಾದ ಹಡೆದವ ಬೇಜವಾಬ್ದಾರನಾದಾಗ, ಅತೀ ಕುಡಿತದ ದಾಸನಾಗಿ ತಾನು ದುಡಿದದ್ದನ್ನೆಲ್ಲಾ ಕುಡಿದು ಒರಗುವವನಾದರೆ ಅಂತವರ ಮಕ್ಕಳು ತಮ್ಮ ಹೊಟ್ಟೆ ಹೊರೆದುಕೊಳ್ಳಲು ಜೀತ ಮಾಡುವುದು ಅನಿವಾರ್ಯವಾಗುತ್ತದೆ. ಕಡಿಮೆ ಸಂಬಳಕ್ಕೆ ಮನೆಗೆಲಸಕ್ಕೆ ಇರಬೇಕಾಗುತ್ತದೆ. ವಿದ್ಯಾಭ್ಯಾಸಕ್ಕಾಗಿ ಖರ್ಚುಮಾಡುವ ಬದಲು ಮಕ್ಕಳನ್ನೂ ದುಡಿಯಲು ಸೇರಿಸಿದರೆ ಹೆಚ್ಚುಗಳಿಸಬಹುದೆಂಬ ದುರಾಸೆಯ ತಂದೆ, ತಾಯಿಯಿಂದ ಮಕ್ಕಳು ಕೆಲಸಕ್ಕೆ ಸೇರಬೇಕಾಗುತ್ತದೆ.
ಬಾಲಕಾರ್ಮಿಕ ಪದ್ದತಿ ಮಕ್ಕಳ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಬೇಕಾಗಿರುವ ವಿದ್ಯಾಭ್ಯಾಸ ಮತ್ತು ಕೌಶಲ್ಯಕ್ಕೆ ಅಡ್ಡಿಯನ್ನುಂಟುಮಾಡುವದರ ಜೊತೆಗೆ, ನಿರಂತರ ದಾರಿದ್ರ್ಯ, ಸ್ಪರ್ದಾತ್ಮಕತೆ, ಉತ್ಪಾದಕತೆ ಮತ್ತು ಆದಾಯದಲ್ಲಿ ಉಂಟಾಗುವ ಕೊರತೆಯು ರಾಷ್ಟ್ರವನ್ನು ನಿರೀಕ್ಷಿತ ಮಟ್ಟದ ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯಲಾರದು. ಕ್ಷಣಿಕ ಲಾಭದ ಆಸೆಯಿಂದ ಹೆಚ್ಚು ಹೆಚ್ಚು ಬಾಲಕಾರ್ಮಿಕರನ್ನ ದುಡಿಸಿಕೊಂಡರೆ ಮುಂದೊಂದು ದಿನ ದೇಶ ಕುಶಲತೆ ಮತ್ತು ಯೋಗ್ಯತೆ ಉಳ್ಳವರ ಕೊರತೆಯ ನಷ್ಟಟವನ್ನು ಎಲ್ಲಾ ರಂಗಗಳಲ್ಲೂ ಅನುಭವಿಸಬೇಕಾಗುವುದು. ಅಸಹಾಯಕರಾದ ಬಾಲಕರನ್ನ ಕಾರ್ಮಿಕ ಪದ್ದತಿಯಿಂದ ಬಿಡುಗಡೆಗೊಳಿಸಿ, ಅವರಿಗೆ ಉಚಿತ ವಿದ್ಯಾಭ್ಯಾಸ ನೀಡುವುದು ಅವರ ಕುಟುಂಬಕ್ಕೆ ಕೂಡ ಸಹಾಯ ಮಾಡಿದಂತೆ. ಇದರಿಂದ ವಯಸ್ಕರಿಗೆ ತಕ್ಕುದಾದ ಉದ್ಯೋಗವೂ ದೊರೆತಂತಾಗುತ್ತದೆ. ಬಾಲಕನಿಗೆ ಜನ್ಮಸಿದ್ದಹಕ್ಕಾದ ಬಾಲ್ಯ ದೊರೆತಂತೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ