ಎಲ್ಲರ ಮಾತು ಮುಗಿಯಲಿ, ನಮಗೆ ಉತ್ತರ ನೀಡಲು ಸಾಕಷ್ಟು ಸಮಯವಿದೆ: ಡಿಸಿಎಂ ಡಿ.ಕೆ.ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: “ಯಾರ್ಯಾರು ಏನೆಲ್ಲಾ ಹೇಳಬೇಕೋ ಹೇಳಲಿ. ಅವರದ್ದು ಏನಿದೆಯೋ ಅದೆಲ್ಲವೂ ಮೊದಲು ಹೊರಗಡೆ ಬರಲಿ. ಅವರ ಮಾತುಗಳೆಲ್ಲ ಮುಗಿಯಲಿ. ಆನಂತರ ನಮ್ಮ ಬಳಿ ಇರುವುದನ್ನು ಬಯಲು ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರ ಪ್ರಶ್ನೆಗಳಿಗೆ ಬುಧವಾರ ಉತ್ತರಿಸಿದ ಅವರು, “ನಮ್ಮ ಬಳಿ ಇರುವ ಮಾಹಿತಿ ಬಹಿರಂಗ ಪಡಿಸಲು ಸಾಕಷ್ಟು ಸಮಯವಿದೆ. ನಮ್ಮ ಬಗ್ಗೆ ತುಂಬಾ ಚರ್ಚೆ ನಡೆಸುತ್ತಿರುವವರಿಗೆ ಉತ್ತರ ನೀಡುವ ಕಾಲ ಸಮೀಪಿಸಿದೆ, ಉತ್ತರ ನೀಡೋಣ” ಎಂದರು.
ಆಪರೇಷನ್ ಹಸ್ತ ಕುರಿತು ಕೇಳಿದ ಪ್ರಶ್ನೆಗೆ, “ನಮ್ಮ ಮುಂದಿನ ಗುರಿ ಲೋಕಸಭಾ ಚುನಾವಣೆ. ಯಾವುದೇ ಕಾರಣಕ್ಕೂ ದ್ವೇಷ ಸಾಧಿಸಬೇಡಿ, ಪಕ್ಷದ ಮತಗಳಿಕೆ ಪ್ರಮಾಣ ಹೆಚ್ಚು ಮಾಡಿ ಎಂದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ ಎಂದರು.
ಸ್ಥಳೀಯವಾಗಿ ಒಮ್ಮೊಮ್ಮೆ ಅನುಕೂಲಸಿಂಧು ರಾಜಕಾರಣ ಮಾಡಿಕೊಳ್ಳಬೇಕಾಗುತ್ತದೆ. ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎನ್ನುವುದು ಸ್ಥಳೀಯ ನಾಯಕರಿಗೆ ಬಿಟ್ಟ ವಿಚಾರ. ದೊಡ್ಡ, ದೊಡ್ಡ ನಾಯಕರನ್ನು ಸೇರಿಸಿಕೊಳ್ಳುತ್ತಿಲ್ಲ, ಅನ್ಯಪಕ್ಷಗಳ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಕಾಂಗ್ರೆಸ್ ಸೇರ್ಪಡೆಗೆ ಒಲವು ತೋರಿದ್ದಾರೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ