ಮಹಾತ್ಮರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತೀಯ ಸಂಸ್ಕೃತಿ ಅತ್ಯಂತ ಉನ್ನತವಾದದ್ದು. ಖಾವಿ ತೊಟ್ಟವರು ಚಿಕ್ಕವರಿರಲಿ, ದೊಡ್ಡವರಿರಲಿ ನಾವು ಅತ್ಯಂತ ಗೌರವದಿಂದ ತಲೆಬಾಗುತ್ತೇವೆ. ಮಹಾತ್ಮರು ನೀಡಿದ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಉನ್ನತ ಪರಂಪರೆಯನ್ನು ಮುಂದುವರಿಸೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದ್ದಾರೆ.
ಬೆಳಗಾವಿಯ ಕುಮಾರಸ್ವಾಮಿ ಬಡಾವಣೆಯ ಶಿವಾಲಯ ಸೇವಾ ಸಂಘ ಹಾಗೂ ಬಡಾವಣೆಯ ರಹವಾಸಿಗಳ ಸಂಘದ ವತಿಯಿಂದ ಸೋಮವಾರ ಸಂಜೆ ಆಯೋಜಿಸಲಾಗಿದ್ದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಸವಣ್ಣನ ಸಂಸ್ಕೃತಿ ನಮ್ಮದು. ವಿಜ್ಞಾನ ಎಷ್ಟೇ ಮುಂದುವರಿದರೂ ನಮ್ಮ ಸಂಸ್ಕೃತಿ, ಸಂಸ್ಕಾರದಿಂದ ನಾವು ಹಿಂದೆ ಸರಿದಿಲ್ಲ. ಇವುಗಳನ್ನು ಮುಂದುವರಿಸುವ ಜೊತೆಗೆ ಮುಂದಿನ ಪೀಳಿಗೆಯ ರಾಯಬಾರಿಗಳಾದ ನಮ್ಮ ಮಕ್ಕಳಿಗೂ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸೋಣ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಯಮಕನಮರಡಿ ಹುಣಶಿಕೊಳ್ಳಮಠದ ಪೂಜ್ಯ ಶ್ರೀ ಸಿದ್ದಬಸವ ಸ್ವಾಮೀಜಿ ವಹಿಸಿದ್ದರು. ಈ ವೇಳೆ ರಹವಾಸಿ ಸಂಘದ ಅಧ್ಯಕ್ಷರಾದ ರುದ್ರಣ್ಣ ಚಂದರಗಿ, ಯಲ್ಲಪ್ಪ ಪಾಟೀಲ, ಸ್ಲಂ ಬೋರ್ಡ್ ಬೆಳಗಾವಿಯ ನಿವೃತ್ತ ಅಧಿಕಾರಿ ಬಿ.ಎಸ್ ಶಂಭುಲಿಂಗಪ್ಪ, ಶಿವಾಲಯ ಸೇವಾ ಸಂಘದ ಅಧ್ಯಕ್ಷರಾದ ಬಿ.ಆಯ್.ಪಾಟೀಲ ಹಾಗೂ ಬಡಾವಣೆಯ ನಿವಾಸಿಗಳು, ಮಹಿಳಾ ಮಂಡಳದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ