
ಪ್ರಗತಿವಾಹಿನಿ ಸುದ್ದಿ: ಹೆಸ್ಕಾಂ ವ್ಯಾಪ್ತಿಯ ಎಲ್ಲ ಗ್ರಾಹಕರಿಗೆ, ರೈತರಿಗೆ ಗುಣಮಟ್ಟದ ಹಾಗೂ ಸಮರ್ಪಕ ವಿದ್ಯುತ್ ಕಲ್ಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಜೊತೆಗೂಡಿ ಕಾರ್ಯನಿರ್ವಹಿಸಿ, ಹೆಸ್ಕಾಂನ್ನೂ ಮಾದರಿಯನ್ನಾಗಿ ಮಾಡೋಣ ಎಂದು ಹೆಸ್ಕಾಂ ಅಧ್ಯಕ್ಷರಾದ ಸೈಯದ್ ಅಜೀಮ್‌ಪೀರ್ ಎಸ್ ಖಾದ್ರಿ ಅವರು ಹೇಳಿದರು.
ಶುಕ್ರವಾರ ಹೆಸ್ಕಾಂ ನಿಗಮ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹೆಚ್ಚಿನ ಕಾಳಜಿ ವಹಿಸಿದ್ದಾರೆ ಎಂದರು.
ಹೆಸ್ಕಾಂ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ಗ್ರಾಹಕರು, ರೈತರ ಸಮಸ್ಯೆಗಳಿಗೆ ನಮ್ಮ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅಧ್ಯಕ್ಷರು, ತಮ್ಮ ಜೀವವನ್ನು ಪಣವಾಗಿಟ್ಟು ಕೆಲಸ ಮಾಡುವ ಪವರ್‌ಮೆನ್‌ಗಳಿಗೆ ಬೆನ್ನೆಲುಬಾಗಿ ನಾವೆಲ್ಲ ನಿಲ್ಲಬೇಕು. ಅವರಿಗೆ ಆತ್ಮಸ್ಥೈರ್ಯ, ಉತ್ಸಾಹ ತುಂಬುವ ಕೆಲಸ ನಿರಂತರವಾಗಿ ಮಾಡಬೇಕು. ಪವರ್‌ಮೆನ್‌ಗಳು ಕರ್ತವ್ಯದ ಸಂದರ್ಭದಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಭೆ, ಕಾರ್ಯಾಗಾರಗಳನ್ನು ನಡೆಸಬೇಕು ಎಂದು ಹೇಳಿದರು.
ಈ ವೇಳೆ ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್, ತಾಂತ್ರಿಕ ನಿರ್ದೇಶಕರು ಜಗದೀಶ ಎಸ್, ಹಣಕಾಸು ನಿರ್ದೇಶಕರು ಪ್ರಕಾಶ ಪಾಟೀಲ, ಪ್ರಧಾನ ವ್ಯವಸ್ಥಾಪಕರು (ಆ ಮತ್ತು ಮಾ.ಸಂ.ಅ) ಮೊಹಮ್ಮದ ಖಿಜರ್, ಹೆಸ್ಕಾಂ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ವಿನಾಯಕ ಪಾಲನಕರ್, ಹೆಸ್ಕಾಂ ಜಾಗೃತ ದಳದ ಎಸ್.ಪಿ ಶ್ರೀಪಾದ್ ಜಲ್ದೆ ಸೇರಿದಂತೆ ಹೆಸ್ಕಾಂನ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.