ಹಿರಿಯರ ಸೇವೆಯ ಮೂಲಕ ದೇವರ ಸೇವೆ ಮಾಡೋಣ – ಸಚಿವೆ ಲಕ್ಷ್ಮೀ ಹೆಬ್ಬಾಳಕರ್


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಹಿರಿಯ ನಾಗರಿಕರೇ ನಮಗೆ ಕಣ್ಣಿಗೆ ಕಾಣುವ ದೇವರು. ಅವರ ಸೇವೆ ಮಾಡುವ ಮೂಲಕ ದೇವರ ಸೇವೆ ಮಾಡೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಇಲ್ಲಿಯ ಕಿಣಿಯೆಯಲ್ಲಿರುವ ಶಾಂತಾಯಿ ವೃದ್ದಾಶ್ರಮದಲ್ಲಿ ಗುರುವಾರ ಪ್ರಾರ್ಥನಾ ಮಂದಿರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ದುರ್ಬಲರೆಂದು ಗುರುತಿಸಲ್ಪಟ್ಟಿರುವ ಹಿರಿಯ ನಾಗರಿಕರು, ವಿಕಲಚೇತನರು, ಮಹಿಳೆಯರು ಮತ್ತು ಮಕ್ಕಳ ಸೇವೆ ಮಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ಈ ಅವಕಾಶವನ್ನು ಬಳಸಿಕೊಂಡು ನನ್ನ ಅವಧಿಯಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಕನಸು ಹೊತ್ತಿದ್ದೇನೆ. ನಮ್ಮನ್ನು ದುರ್ಬಲರ ಸೇವೆಯಲ್ಲಿ ತೊಡಗಿಸಿಕೊಂಡಾಗ ಅದರಿಂದ ಸಿಗುವ ಆತ್ಮತೃಪ್ತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದರು.

ಆಶ್ರಮದ ರಸ್ತೆ ಅಭಿವೃದ್ಧಿ ಭರವಸೆ ನೀಡಿದ ಲಕ್ಷ್ಮೀ ಹೆಬ್ಬಾಳಕರ್, ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು. ಕಳೆದ 25 ವರ್ಷದಿಂದ ಶಾಂತಾಯಿ ವೃದ್ದಾಶ್ರಮ ನಿರಂತರ ಸೇವೆಯಲ್ಲಿ ತೊಡಗಿಕೊಂಡಿದೆ. ವಿಜಯ ಮೋರೆ ಮತ್ತು ಇಲ್ಲಿನ ಎಲ್ಲ ಪದಾಧಿಕಾರಿಗಳಿಗೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರೆಲ್ಲರ ಕುಟುಂಬಕ್ಕೆ ದೇವರ ಆಶಿರ್ವಾದ ಖಂಡಿತ ಇರುತ್ತದೆ ಎಂದು ಹೆಬ್ಬಾಳಕರ್ ಹೇಳಿದರು.

ಇದೇ ವೇಳೆ ವೃದ್ದಾಶ್ರಮದ ಮಹಿಳೆಯರು ಸಚಿವರನ್ನು ಸತ್ಕರಿಸಿದರು.
ವೃದ್ದಾಶ್ರಮದ ಅಧ್ಯಕ್ಷ ವಿಜಯ ಪಾಟೀಲ, ಕಾರ್ಯಾಧ್ಯಕ್ಷ ವಿಜಯ ಮೋರೆ, ಜಯಂತ ಹುಂಬರವಾಡಿ, ಸಮೀರ ಕಣಬರ್ಗಿ, ಕೀತ್ ಮಚಾಡೊ, ದಿಲೀಪ್ ಚಿಟ್ನಿಸ್, ಸಿದ್ಧಾರೂಢ ಹುಂದ್ರೆ, ಆನಂದ ದೇಸಾಯಿ, ಪ್ರವೀಣ್ ದೊಡ್ಡಣ್ಣನವರ್, ವಿಶ್ವನಾಥ್ ಕೆ ಸಾಮಂತ್, ರಾಜೇಂದ್ರ ಹರಕುಣಿ, ನಿಲೇಶ್ ಕೋಚಾ, ಬಸವನಗೌಡ ಪಾಟೀಲ, ಯುವರಾಜ್ ಕದಂ, ಬಾಮನವಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕುಂತಲಾ ಎಸ್ ಹಣಬರ, ಪ್ರಿಯಾಂಕಾ ಪಿ ಪಾಟೀಲ್, ವರ್ಷಾ ದುಕಾರೆ ಮೊದಲಾದವರು ಇದ್ದರು. ಅಲನ್ ಮೋರೆ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ