ಜಯಶ್ರೀ ಜೆ. ಅಬ್ಬಿಗೇರಿ
ಇಂದಿನ ಜೀವನವನ್ನು ಹಿಂದಿನ ಜೀವನಕ್ಕೆ ಹೋಲಿಸಿದರೆ ಅಜಗಜಾಂತರ ಎನಿಸುವಷ್ಟು ಬದಲಾಗಿದೆ. ಮೂರ‍್ನಾಲ್ಕು ದಶಕಗಳಲ್ಲಿ ಎದುರಿಸುತ್ತಿದ್ದ ಯಾವ ಸಮಸ್ಯೆಗಳೂ ಈಗ ನಮ್ಮ ಮುಂದೆ ಇಲ್ಲ. ಅದಕ್ಕೆ ಕಾರಣ ರಾಕೆಟ್ ವೇಗದ ಗತಿಯಲ್ಲಿ ಬಾನಿಗೇರುತ್ತಿರುವ ತಾಂತ್ರಿಕ ಅಭಿವೃದ್ಧಿ. ತೀರಾ ಇತ್ತೀಚಿಗಿನ ಎಲ್ಲ ಅವಿಷ್ಕಾರಗಳು ದೈನಂದಿನ ಜೀವನವನ್ನು ಹೂ ಎತ್ತಿಡುವಷ್ಟು ಸಲೀಸಾಗಿಸಿವೆ. ಅದು ಸಾರಿಗೆ ಇರಬಹುದು. ಬಂಧು ಬಾಂಧವ ಆತ್ಮೀಯ ಮಿತ್ರರ ಸಂಪರ್ಕ. ಮದುವೆ ಮುಂಜಿವಿಗೆ ಸಿದ್ಧತೆ ಮಾಡುವುದು. ಹೀಗೆ ಒಂದೇ ಎರಡೇ ಇದರ ಪಟ್ಟಿ ಹನುಮನ ಬಾಲದಂತೆ ಬೆಳೆಯುತ್ತದೆ. ಅವುಗಳೆಲ್ಲ ಈಗ ಚಿಟಿಕೆ ಹೊಡೆಯುವಷ್ಟರಲ್ಲಿ ಫೋನ್ ಮೂಲಕವೇ ಬುಕ್ ಮಾಡಿ ಹಣ ಕೊಟ್ಟು ಮನೆ ಮಂದಿಯೆಲ್ಲ ಆರಾಮಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ಅಷ್ಟೇ ಏಕೆ ಮನೆಯ ಎಲ್ಲ ಅಂದರೆ ಎಲ್ಲ ಕೆಲಸಗಳನ್ನು ಮಾಡಲು ಯಂತ್ರಗಳು ರೊಬೋಟ್‌ಗಳು ಅವಿಷ್ಕರಿಸಲ್ಪಟ್ಟಿವೆ. ಅರೆ! ಇಷ್ಟೆಲ್ಲ ಪೀಠಿಕೆ ಏಕೆ ಅಂತಿರೇನು? ಏನಿಲ್ಲ, ಏನೆಲ್ಲ ಸುಲಭವಾದ್ರೂ ಮಹಿಳೆಯರ ಜೀವನದ ಸiಸ್ಯೆಗಳನ್ನು ಸಂಪೂರ್ಣವಾಗಿ ಇಂದಿಗೂ ಬಗೆಹರಿಸಲಾಗಿಲ್ಲ. ಇಪ್ಪತ್ತೊಂದನೇ ಶತಮಾನದಲ್ಲೂ ಸ್ತ್ರೀಲೋಕದ ಸಮಸ್ಯೆಗಳನ್ನು ಗುರುತಿಸಿ ಶಾಶ್ವತ ಪರಿಹಾರ ನೀಡಲು ಬಲವಾದ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.ಇತ್ತೀಚಿನ ದಿನಗಳಲ್ಲಿ ಅಗಾಧವೆನಿಸುವಷ್ಟು ಸುಧಾರಣೆ ಮಹಿಳಾ ಲೋಕದಲ್ಲಿ ಆಗಿದೆ ಎಂದೆನಿಸಿದರೂ ಸಮಸ್ಯೆಗಳ ಬೇರುಗಳನ್ನು ಬುಡ ಸಮೇತ ಕೀಳುವ ಪ್ರಯತ್ನ ಇನ್ನೂ ಆಗಬೇಕಿದೆ. ಬರೀ ಮೇಲ್ನೋಟದಲ್ಲಾದ ಸುಧಾರಣೆಗಳಿಂದ ಆಕೆಗೆ ಎಷ್ಟು ಪ್ರಮಾಣದ ಸ್ವಾತಂತ್ರ್ಯ ಸಿಕ್ಕಿದೆ ಎಂಬ ಪ್ರಶ್ನೆ ಕೆಲವೊಮ್ಮೆ ಬಿಡದೇ ಕಾಡುತ್ತದೆ.ಮಹಿಳೆ ಇಂದು ಏನೆಲ್ಲ ಪಡೆದುಕೊಂಡಿದ್ದಾಳೋ ಯಾವೆಲ್ಲ ಅವಕಾಶಗಳನ್ನು ಬಾಚಿಕೊಂಡಿದ್ದಾಳೋ ಅದೆಲ್ಲ ಆಕೆಯ ಅಧಿಕ ಹೋರಾಟದ ಸಾಮರ್ಥ್ಯದಿಂದ ಎಂದರೆ ಅತಿಶಯೋಕ್ತಿಯಾಗಲಾರದು
ಹಿಂದೆ -ಇಂದು ಮುಂದೆ
ರೈತ ಮಹಿಳೆಯಾಗಿ, ಕಾರ್ಮಿಕಳಾಗಿ,ಗೃಹಿಣಿಯಾಗಿ, ಉದ್ಯೋಗಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಈ ಸಮಾಜ ವ್ಯವಸ್ಥೆ ಆಕೆಯನ್ನು ಇನ್ನಿಲ್ಲದಂತೆ ನಿಯಂತ್ರಿಸುತ್ತಿದೆ. ಆಕೆ ಮಂಗಳನ ಅಂಗಳದಲ್ಲಿ ಚಂದಿರನ ಬೆಳದಿಂಗಳಲ್ಲಿ ಕಾಲಿಡುವ ಸಂದರ್ಭದಲ್ಲೂ ಕಬಂಧ ಬಾಹುಗಳಲ್ಲಿ ಹಿಡಿದಿಟ್ಟಿದೆನ್ನುವ ಸಂಗತಿ ವಿಪರ್ಯಾಸ ಮೂಡಿಸದೇ ಇರದು. ಇವತ್ತಿಗೂ ಲಿಂಗ ತಾರತಮ್ಯ ಜೀವಂತವಿದೆ ಎಂಬುದನ್ನು ಪ್ರತ್ಯೇಕಿಸಿ ಹೇಳಬೇಕಿಲ್ಲ. ಮೊದಲೆಲ್ಲ ಶಿಕ್ಷಣ ಮತ್ತು ನರ್ಸಿಂಗ್ ಕ್ಷೇತ್ರದಲ್ಲಿ ಮಾತ್ರ ಮಹಿಳೆಯರಿದ್ದರು. ಇತ್ತೀಚಿನ ದಿನಮಾನದಲ್ಲಿ ಉದ್ಯೋಗಾವಕಾಶಗಳು ಹೆಚ್ಚಿದಂತೆ ಸಾಂಪ್ರದಾಯಿಕವಲ್ಲದ ಕ್ಷೇತ್ರದಲ್ಲೂ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಳ್ಳುತ್ತಿದ್ದಾಳೆ. ಈಗ ಆಕೆ ಇರದ ರಂಗಗಳೇ ಇಲ್ಲದಂತಾಗಿವೆ. ಎಲ್ಲ ರಂಗಗಳಲ್ಲೂ ಪ್ರಕಾಶಮಾನವಾಗಿ ಮಿಂಚುತ್ತಿದ್ದಾಳೆ.ಆರ್ಥಿಕವಾಗಿ ಸದೃಢಳಾಗಿ ಕುಟುಂಬವನ್ನು ಅಕ್ಷರಶಃ ಮುನ್ನಡೆಸುತ್ತಿದ್ದಾಳೆ.ಮೊದಲೆಲ್ಲ ಮನೆಯಾಯಿತು ಮಕ್ಕಳಾಯಿತೆಂದು ಮನೆಯೊಳಗಿದ್ದಳು. ಹೊರಗಿನ ಜಗತ್ತೇ ಗೊತ್ತಿರಲಿಲ್ಲ. ಹೊಸಿಲೊಳಗೆ ಇದ್ದವಳು ಹೊಸಲಾಚೆ ಬಂದು ಬೆಳಗಿಂದ ಸಂಜೆವರೆಗೆ ದುಡಿಯುತ್ತಿದ್ದಳು. ಈಗೀಗ ಸಮಯದ ಮಿತಿಯಿಲ್ಲ. ಮನೆಗೆಲಸದ ಜೊತೆ ಹೊರಗಿನ ಕೆಲಸವೂ ಸೇರಿಕೊಂಡಿದೆ. ಹೀಗಾಗಿ ಒತ್ತಡ ಹೆಚ್ಚುತ್ತಿದೆ ಅನ್ನೋದಂತೂ ನಿಜ.ಮನೆ ಮಂದಿಗಾಗಿ ತನ್ನ ಆರೋಗ್ಯವನ್ನು ಲೆಕ್ಕಿಸದೇ ದುಡಿಯುತ್ತಿದ್ದಾಳೆ. ಹೊರಗೆ ಸಂಬಳಕ್ಕಾಗಿ ದುಡಿದು ಮನೆಯ ಆರ್ಥಿಕ ವ್ಯವಸ್ಥೆ ಸುಧಾರಿಸುತ್ತಿದ್ದಾಳೆ. ಹೀಗಾಗಿ ಆಕೆ ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಒತ್ತಡವನ್ನು ಎದುರಿಸುತ್ತಿದ್ದಾಳೆಂಬುದು ಸೂರ್ಯನಷ್ಟು ಸ್ಪಷ್ಟ. ಮನರಂಜನಾ ಲೋಕ, ರಾಜಕೀಯ, ಶಿಕ್ಷಣ, ಪತ್ರಿಕೋದ್ಯಮ, ಆರೋಗ್ಯ, ಸಿನಿಮಾ,ಸವಾಲಿನ ಕ್ಷೇತ್ರಗಳಾದ ಪೋಲಿಸ್ ಹಾಗೂ ಸೇನೆಗಳಲ್ಲೂ ಅಪ್ರತಿಮವೆನಿಸುವಷ್ಟು ಕೊಡುಗೆ ನೀಡಿದ್ದಾಳೆ.ಇದು ಹೆಮ್ಮೆ ಮತ್ತು ಹರ್ಷದಾಯಕ ಸಂಗತಿ. ಆದರೂ ಆಕೆ ದಿನವೂ ಸಮಸ್ಯೆಗಳ ಸಾಗರದಲ್ಲಿಯೇ ಮುಳುಗೇಳುತ್ತಿದ್ದಾಳೆ. ಮುಂದಿನ ದಿನಮಾನಗಳಲ್ಲಿ ಆಕೆಯ ಅಸ್ತಿತ್ವ ಅಪಾಯದಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಇದು ಅಧ್ಯಯನಗಳ ಸಮಿಕ್ಷೆಗಳ ಅಂಕಿ ಅಂಶಗಳಿಂದ ಬಯಲಾದ ಕಳವಳಕಾರಿ ಸಂಗತಿ.ಅದರತ್ತ ಒಂದು ಸಣ್ಣ ನೋಟ ಇಲ್ಲಿದೆ.
ಆರೋಗ್ಯ ಸಮಸ್ಯೆ
೨೦೧೭-೧೮ರ ಅವಧಿಯಲ್ಲಿ ೨೯ ರಾಜ್ಯಗಳು ೫ ಕೇಂದ್ರಾಡಳಿತ ಪ್ರದೇಶಗಳು ಮತ್ತು ೪೬೫ ಜಿಲ್ಲೆಗಳಲ್ಲಿ ಮಹಿಳೆಯರ ಆರೋಗ್ಯದ ಸ್ಥಿತಿಗತಿ ಕುರಿತಾಗಿ ಅಧ್ಯಯನ ನಡೆಸಲಾಯಿತು. ೧೮ ವರ್ಷಕ್ಕಿಂತ ಮೇಲ್ಪಟ್ಟವರು ವಿಶ್ಲೇಷಣೆಯ ಘಟಕವಾಗಿದ್ದರು. ೧೮ ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲೆ ಮುಟ್ಟಿನ ಸಮಸ್ಯೆಯ ಕುರಿತಾಗಿ ಪ್ರತ್ಯೇಕವಾಗಿ ಅಧ್ಯಯನವನ್ನು ನಡೆಸಲಾಯಿತು. ೨೫ ರಾಜ್ಯಗಳು ೫ ಕೇಂದ್ರಾಡಳಿತ ಪ್ರದೇಶಗಳು ಮತ್ತು ೨೮೩ ಜಿಲ್ಲೆಗಳಲ್ಲಿ ೭೬೭೫ ಬಾಲಕಿಯರನ್ನು ಸಂದರ್ಶಿಸಲಾಯಿತು. ಬಹುತೇಕರು ವಿವಾಹಿತರು. ಅವಿವಾಹಿತ ಮಹಿಳೆಯರಲ್ಲಿ ಶೇ (೨೧.೯೬ರಷ್ಟು ) ಹೆಚ್ಚಿನವರು ೧೮-೨೫ ವರ್ಷ ವಯಸ್ಸಿನವರು. ಶೇ ೬೪ ರಷ್ಟು ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಮುಟ್ಟಿನ ಸಮಸ್ಯೆ ಪ್ರಮುಖವಾಗಿದೆ. ಸಂಧಿವಾತವು ಎರಡನೇ ಸ್ಥಾನದಲ್ಲಿದ್ದು, ಅದರ ಪ್ರಮಾಣ ಶೇ ೧೫ ರಷ್ಟಿದೆ. ಕಳವಳಕಾರಿ ಸಂಗತಿಯೆಂದರೆ ಕೆಲವರು ಹೃದಯ ಸಮಸ್ಯೆ ಶೇ(೩.೦೭ರಷ್ಟು) ಮಧುಮೇಹ (೧.೬೨ರಷ್ಟು) ಕ್ಯಾನ್ಸರ್(ಶೇ೦.೫೧ರಷ್ಟು)ನಿಂದ ಬಳಲುತ್ತಿದ್ದಾರೆ. ಶೇ ೫.೨೮ರಷ್ಟು ಬಾಲಕಿಯರು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.ಇನ್ನೊಂದು ಅಪಾಯಕಾರಿ ಸಂಗತಿಯೆಂದರೆ ೧೮ರಿಂದ ೨೫ ವಯಸ್ಸಿನವರು ಪದೇ ಪದೇ ಆಸ್ಪತ್ರೆಗೆ ದಾಖಲಾಗಿರುವುದು ಕಂಡು ಬಂದಿದೆ. ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ ೪೦ ರಷ್ಟು ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಉನ್ನತ ಗುಣಮಟ್ಟದ ಆರೊಗ್ಯವು ವಿವಾಹಿತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಆದರೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರುವ ಮಹಿಳೆಯರಲ್ಲಿ ಈ ಪ್ರಮಾಣ ಅತಿ ಕಡಿಮೆ. ಸರಿಯಾಗಿ ಅರ್ಧದಷ್ಟು ಮಹಿಳೆಯರು ದಿನದಲ್ಲಿ ಎರಡು ಹೊತ್ತಿನ ಆಹಾರವನ್ನು ಸ್ವೀಕರಿಸುತ್ತಾರೆ. ಆದರೆ ೩.೭೩ರಷ್ಟು ಮಹಿಳೆಯರು ದಿನದಲ್ಲಿ ಒಮ್ಮೆ ಮಾತ್ರ ಆಹಾರವನ್ನು ಸ್ವೀಕರಿಸುತ್ತಾರೆಂದು ತಿಳಿದು ಬಂದಿದೆ.
ಶೈಕ್ಷಣಿಕ ಮಟ್ಟ
ಹಿಂದೆಂದಿಗಿಂತಲೂ ಈಗ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೇವೆಂಬುದು ಪ್ರಚಾರದಲ್ಲಿದ್ದರೂ ನಿಜಾಂಶ ಇನ್ನೂ ತಕ್ಕ ಮಟ್ಟಿಗೆ ಸಾಧನೆ ಆಗಿಲ್ಲ ಎಂದು ಹೇಳುತ್ತಿದೆ.ಬುಡಕಟ್ಟು ಮಹಿಳೆಯರಲ್ಲಿ ಹೆಚ್ಚಿನ ಅನಕ್ಷರತೆಯನ್ನು ಗಮನಿಸಲಾಗಿದೆ. ೨೦೧೧ರ ಜನ ಗಣತಿಯ ಪ್ರಕಾರ ಸ್ತ್ರೀಯರ ಸಾಕ್ಷರತೆಯ ಪ್ರಮಾಣವು ಶೇ ೬೪.೬೩ ರಷ್ಟಿತ್ತು. ಪ್ರಸ್ತುತ ಅಧ್ಯಯನದಲ್ಲಿ ಸ್ತ್ರೀ ಸಾಕ್ಷರತೆಯ ಪ್ರಮಾಣವು ಶೇ ೭೯.೬೩ರಷ್ಟು ಎಂದು ಕಂಡು ಬಂದಿದೆ. ಸಾಕ್ಷರತೆಯ ಪ್ರಮಾಣ ಹೆಚ್ಚಳವಾಗಿದ್ದರೂ ಅವರಲ್ಲಿ ಕೆಲವೇ ಕೆಲವರು ಮಾತ್ರ ಪದವಿಗಿಂತ ಹೆಚ್ಚಿನ ಶಿಕ್ಷಣದ ಮಟ್ಟವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿಕ್ಷಣ ಸ್ಥಗಿತಗೊಳಿಸಲು ಮದುವೆ ಮತ್ತು ಆರ್ಥಿಕ ತೊಂದರೆಗಳು ಪ್ರಮುಖ ಕಾರಣಗಳಾಗಿವೆ ಎಂದು ಕಂಡುಕೊಳ್ಳಲಾಗಿದೆ. ಮೀಸಲಾತಿ ನೀತಿ ಮತ್ತು ಶೈಕ್ಷಣಿಕ ಬೆಂಬಲದ ಕ್ರಮಗಳು ಹಿಂದುಳಿದ ವರ್ಗಗಳ ಮಹಿಳೆಯರಿಗೆ ಉನ್ನತ ಶಿಕ್ಷಣ ಪಡೆಯಲು ನೆರವಾಗುತ್ತಿವೆ ಎಂಬುದನ್ನು ಗಮನಿಸಲಾಗಿದೆ.
ಆಸಕ್ತಿ ವಿಷಯ
ಆಸಕ್ತಿ ವಿಷಯವಾಗಿ ಸಂದರ್ಶಿಸಲ್ಪಟ್ಟವರಲ್ಲಿ ಮೂರನೇ ಎರಡು ಭಾಗದಷ್ಟು ಹೆಣ್ಣುಮಕ್ಕಳು ತಮ್ಮ ಆಸಕ್ತಿಯನ್ನು ಹೇಳಲು ಸಾಧ್ಯವಾಗಲಿಲ್ಲ. ಬಹುಶಃ ಮನೆಗೆಲಸಗಳ ಒತ್ತಡ ಅದರೊಂದಿಗೆ ಸಾಂಪ್ರದಾಯಿಕ ಮನಸ್ಥಿತಿ, ಜವಾಬ್ದಾರಿಗಳ ಮೂಟೆಗಳು ಆಕೆಯನ್ನು ಆಸಕ್ತಿಯ ವಿಷಯದ ಬಗ್ಗೆ ಯೋಚಿಸಲು ನಿರ್ಬಂಧಿಸುತ್ತಿವೆ ಎಂಬುದನ್ನು ಸೂಚಿಸುತ್ತವೆ.ನಾಲ್ಕನೇ ಒಂದು ಭಾಗದಷ್ಟು ಜನರು ವಿರಾಮ ಸಮಯವನ್ನು ಪಡೆಯಲು ಸಾಧ್ಯವಾಗಲಿಲ್ಲ ಎನ್ನುವುದನ್ನು ಗಮನಕ್ಕೆ ತಂದಿದ್ದಾರೆ. ಇನ್ನೂ ಅಚ್ಚರಿಯ ಸಂಗತಿಯೆಂದರೆ ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ತಮ್ಮ ಆಸಕ್ತಿಯ ಕ್ಷೇತ್ರದ ಬಗ್ಗೆ ಯೋಚಿನೆಯನ್ನೇ ಮಾಡಿರಲಿಲ್ಲವೆಂದು ತಿಳಿಸಿದ್ದಾರೆ.
ಉದ್ಯೋಗ
ಸಾಮಾನ್ಯ ವರ್ಗದ ಮಹಿಳೆಯರಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚು. ಪರಿಶಿಷ್ಟ ಪಂಗಡ ವಿಭಾಗದಲ್ಲಿ ಮಹಿಳಾ ಉದ್ಯೋಗಸ್ಥರ ಪ್ರಮಾಣ ಅತಿ ಹೆಚ್ಚು. ಶೇ ೬೦ ಕ್ಕಿಂತ ಹೆಚ್ಚಿನವರು ಸಾಲ ಸೌಲಭ್ಯವನ್ನು ಹೊಂದಿಲ್ಲ. ಉದ್ಯೋಗಸ್ಥ ಮಹಿಳೆಯರಲ್ಲಿ ಬಹುತೇಕರು ತಮ್ಮ ಕೆಲಸದ ಸ್ಥಳದಲ್ಲಿ ವಿಶ್ರಾಂತಿ ಕೊಠಡಿ, ಸಾರಿಗೆ ವ್ಯವಸ್ಥೆ, ಕ್ಯಾಂಟೀನ್ ವ್ಯವಸ್ಥೆಯನ್ನು ಕಲ್ಪಿಸಲಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಮಾಡಬೇಕಾಗಿರುವುದು
ದೈಹಿಕ ಸಾಮರ್ಥ್ಯ, ಜೀವನ ಕೌಶಲ್ಯ, ಮೌಲ್ಯವರ್ಧನೆಗೆ ಸಂಬಂಧಿಸಿದಂತೆ ಪಠ್ಯಕ್ರಮವನ್ನು ಶಿಕ್ಷಣದ ಎಲ್ಲ ಹಂತಗಳಲ್ಲಿ ಬೋಧಿಸಬೇಕು.
ಪ್ರತಿ ಕುಟುಂಬದಲ್ಲೂ ಲಿಂಗ ಸಮಾನತೆಯ ಕುರಿತಾಗಿ ಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಉದ್ಯೋಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ವೇಗಗೊಳಿಸಲು ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
ಪ್ರೌಢ ಶಾಲೆಯ ಹಂತದಲ್ಲಿ ಹೆಣ್ಣು ಮಕ್ಕಳು ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡುವುದರ ಕಡೆಗೆ ಎನ್‌ಜಿಓಗಳು ಗಮನವನ್ನು ಕೇಂದ್ರೀಕರಿಸಬೇಕು. ಶಾಲಾ ಮಟ್ಟದಲ್ಲಿ ಉದ್ಯೋಗ ಕೌಶಲ್ಯ ತರಬೇತಿ ನೀಡುವುದು.
ಹದಿ ಹರೆಯದ ಹೆಣ್ಣುಮಕ್ಕಳಿಗೆ ಆಹಾರ, ಆರೋಗ್ಯ, ಉದ್ಯೋಗ ಜಾಗೃತಿ ಮತ್ತು ಆಪ್ತ ಸಲಹೆ ಕಾರ್ಯಕ್ರಮಗಳನ್ನು ಹೆಚ್ಚಿಸುವುದು.
ಕಂಪ್ಯೂಟರ್ ಶಿಕ್ಷಣದ ಕೊರತೆ ನೀಗಿಸಲು ಸಮರ್ಪಕ ವ್ಯವಸ್ಥೆ. ಮಹಿಳೆಯರಿಗಾಗಿ ಪ್ರತ್ಯೇಕ ಆಫ್ ಲೈನ್ ಕೋರ್ಸಗಳನ್ನು ವ್ಯವಸ್ಥೆ ಮಾಡುವುದು.
ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಎಲ್ಲ ಯೋಜನೆಗಳನ್ನು ತಳಮಟ್ಟದಲ್ಲಿ ವಿಸ್ತರಿಸುವುದು. ಕೌಶಲ್ಯ ತರಬೇತಿ ಕೇಂದ್ರಗಳನ್ನು ಉದ್ಯೋಗ ನೀಡಬಲ್ಲ ಸಂಸ್ಥೆಗಳೊಂದಿಗೆ ಸಂಯೋಜಿಸುವುದು.
ಅಸಂಘಟಿತ ವಲಯದ ಮಹಿಳೆಯರ ಸ್ಥಿತಿಯನ್ನು ನೊಡಿಕೊಳ್ಳಲು ಮೇಲ್ವಿಚಾರಕ ಸಮಿತಿಗಳ ನಿರ್ಮಾಣ. ಆಂತರಿಕ ದೂರು ಸಮಿತಿಗಳ ಪರಿಣಾಮಕಾರಿ ಅನುಷ್ಟಾನದ ಅಗತ್ಯತೆ
ಪರಿಪೂರ್ಣ ಆಹಾರದ ಕುರಿತು ಜಾಗೃತಿ ಮತ್ತು ದಿನದಲ್ಲಿ ಸೇವಿಸಬೇಕಾದ ಆಹಾರದ ಪ್ರಮಾಣದ ಬಗೆಗೆ ಎಲ್ಲ ವರ್ಗದ ಮಹಿಳೆಯರಿಗೆ ಜಾಗೃತಿ ಕಾರ್ಯಕ್ರಮ ಆಯೋಜಿಸುವುದು.
ಕಟು ಸತ್ಯದ ಕೊನೆ ಹನಿ
ಮಹಿಳೆಯರ ಪ್ರಗತಿಯ ಗತಿ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅಂದರೆ ನಾಗಾಲೋಟದಲ್ಲಿದೆ ಎಂಬುದು ಕಣ್ಣಿಗೆ ರಾಚುವಂತೆ ಕಾಣುತ್ತಿದೆ. ಮೇಲ್ನೋಟಕ್ಕೆ ಉದ್ಯೋಗಸ್ಥ, ಉದ್ಯಮಿ, ಯಶಸ್ವಿ ಮಹಿಳೆಯಾಗುವಲ್ಲಿ ಹಲವಾರು ಸಂಕಷ್ಟಗಳನ್ನು ದಾಟಿ ಸ್ವ ಸಾಮರ್ಥ್ಯದಿಂದ ಸಫಲಳಾಗಿದ್ದು ಕಂಡು ಬರುತ್ತದೆ. ಮಹಿಳೆ ಆತ್ಮವಿಶ್ವಾಸದ ಗಣಿಯಾಗಿದ್ದಾಳೆ. ತನ್ನಿಷ್ಟದಂತೆ ಬದುಕುವ ರಾಣಿಯಂತೆ ರಾರಾಜಿಸುತ್ತಾಳೆ. ಆದರೆ ಜೀವನ ಜಂಜಡಗಳಿಗೆ ಮನದ ತಲ್ಲಣಗಳಿಗೆ ಪರಿಹಾರ ದೊರೆತಿಲ್ಲ.ಮಹೋನ್ನತವಾದುದನ್ನು ಸಾಧಿಸಿದ, ಸಾಧಿಸುತ್ತಿರುವ ಮಹಿಳೆಯರ ಸಾವಿರ ಸಾವಿರ ಸಾಲು ಕಣ್ಮುಂದೆ ಇದೆ.ಹೀಗೆ ಪ್ರಗತಿಯ ಗತಿ ಬದಲಾಗಿದ್ದರೂ ಒಳ ಹೊಕ್ಕು ನೋಡಿದರೆ ಆಕೆಯ ಸ್ಥಿತಿ ಹೇಳಿಕೊಳ್ಳುವಷ್ಟು ಬದಲಾಗದಿರುವುದನ್ನು ಕಂಡರೆ ಆತಂಕವಾಗುತ್ತದೆ. ವೃತ್ತಿಪರ ಮಹಿಳೆಯ ಶೀಲ ನಡತೆಯ ಬಗ್ಗೆ ಸಾಂಪ್ರದಾಯಿ ಕಣ್ಣುಗಳ ಸಂಶಯ ಸದಾ ಇದೆ. ಬೆವರಿಳಿಸಿ ದುಡಿದರೂ ಶ್ರಮದ ಫಲವನ್ನು ಅನುಭವಿಸಲಾಗದ ದುಸ್ಥಿತಿ ಆಕೆಯದು. ಹೊಸ ಸಮಸ್ಯೆಗಳ ಹುಟ್ಟಿಗೆ ಆಕೆಯೇ ಕಾರಣವೆಂದು ಬಿಂಬಿಸಲಾಗುತ್ತದೆ. ಒಟ್ಟಾರೆಯಾಗಿ ಹೇಳ ಬೇಕೆಂದರೆ ಸಂಸ್ಕೃತಿಯ ಹರಿಕಾರಳಾದ ಮಹಿಳೆಯ ಪ್ರಗತಿಯ ಗತಿ ಬದಲಾಗಿದೆ ಹೊರತು ಸ್ಥಿತಿ ಬದಲಾಗಿಲ್ಲ. ಎಷ್ಟು ದುಡಿದರೂ ನೆಮ್ಮದಿ ಸಿಗದ ಹೀನಾಯ ಸ್ಥಿತಿ ಆಕೆಯದು.ಸ್ಥಿತಿ ಬದಲಾಗಲು ಆಕೆಯೊಳಗಿನ ಶಕ್ತಿ ಸಾಮರ್ಥ್ಯವನ್ನು ಅರಿಯುವಂತೆ ಮಾಡಬೇಕಿದೆ.ಬೌದ್ಧಿಕ ವಿಕಾಸಕ್ಕೆ ಮಣೆ ಹಾಕಬೇಕಿದೆ.ಆಕೆಯತ್ತ ನೋಡುವ ದೃಷ್ಟಿ ಬದಲಿಸಬೇಕಿದೆ. ಶಿಕ್ಷಣ ಆರೋಗ್ಯ ಉದ್ಯೋಗದಲ್ಲಿ ಭಯದ ವಾತಾವರಣದಲ್ಲಿರುವ ಆಕೆಯ ಸ್ಥಿತಿಯನ್ನು ಎತ್ತರಕ್ಕೇರಿಸಬೇಕಿದೆ. ಒಟ್ಟಿನಲ್ಲಿ ಆಕೆಗೆ ಭರವಸೆಯ ನಾಳೆಗಳನ್ನು ಭದ್ರತೆಯ ಬದುಕನ್ನು ನೀಡಿ ಪೋಷಿಸುವ ಅಗತ್ಯತತೆ ಹೆಚ್ಚಿದೆ ಎಂಬುದನ್ನು ತಿಳಿದು ನಡೆದರೆ ಬಾಳು ಬೆಳಗುವವಳ ಬಾಳೂ ಬೆಳಗಬಲ್ಲುದು. ನಮ್ಮೆಲ್ಲರ ಬಾಳು ಬೆಳಗುವವಳ ಬಾಳು ಬೆಳಗಿಸಲು ನಾವೂ ಸಹಕರಿಸೋಣವಲ್ಲವೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ