

ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲಿಷ್ ಉಪನ್ಯಾಸಕರು
ಬೆಳಗಾವಿ
ಆಮೆ ಮತ್ತು ಮೊಲದ ಕಥೆಯನ್ನು ಬಹುತೇಕ ನಾವೆಲ್ಲ ಕೇಳಿದ್ದೇವೆ. ಚಿಕ್ಕ ಮಕ್ಕಳಿಗೂ ಹೇಳಿದ್ದೇವೆ. ಹಾಗಾದರೆ, ಆ ಕಾಲ್ಪನಿಕ ಕಥೆಯ ಸಂದೇಶವಾದರೂ ಏನೆಂದು ನೋಡಿದರೆ ಎದುರಾಳಿ ನಮಗಿಂತ ಎಷ್ಟೇ ಶಕ್ತಿಶಾಲಿಯಾಗಿದ್ದರೂ ಧೈರ್ಯ ಕಳೆದುಕೊಳ್ಳದೇ ನಿರಂತರ ಪ್ರಯತ್ನವನ್ನು ಮಾಡುತ್ತಿದ್ದರೆ ಗೆಲ್ಲಬಲ್ಲೆವು. ಒಮ್ಮೆಲೇ ಗೆಲ್ಲದಿದ್ದರೂ ನಿಧಾನವಾಗಿಯಾದರೂ ಗೆಲುವು ಸಾಧಿಸಬಹುದು ಎನ್ನುವ ನೀತಿಯನ್ನು ಆಮೆ ಮೊಲದ ಕಥೆ ಸಾರಿ ಹೇಳುತ್ತದೆ. ಗುರು ಹಿರಿಯರು ಜ್ಞಾನಿಗಳು ಹೇಳಿದ ಮಾತುಗಳು ಸಾಧನೆಯ ಹಾದಿಯಲ್ಲಿ ಪ್ರೇರಣೆಯನ್ನು ನೀಡುವುದು ಸತ್ಯ.
ತಾಳಿಕೊಳ್ಳಲಾಗದ ಹೇಳಿಕೊಳ್ಳಲಾಗದ ಕಷ್ಟದ ಒತ್ತಡದಿಂದ ಮಾಡಲೇಬೇಕಾದ ಕೆಲಸದಿಂದ ದೂರಾಗುತ್ತೇವೆ. ಕೆಲವೊಮ್ಮೆ ಬದುಕಿನಲ್ಲಿ ಅಚಾನಕ್ಕಾಗಿ ನಡೆದ ಘಟನೆಗಳ ನೋವಿನ ಯಾತನೆಯನ್ನು ತಡೆದುಕೊಳ್ಳಲಾಗದೇ ಬದಲಾವಣೆ ಬಯಸಿ ಕಾಲೆಳೆದ ಕಡೆ ಸಾಗುತ್ತೇವೆ. ಮನಸ್ಸು ತಿಳಿಯಾದ ಮೇಲೆ ಅದು ನಮ್ಮನ್ನು ಇನ್ನಷ್ಟು ಕೆಳಕ್ಕೆ ತಳ್ಳುತ್ತಿದೆ ಅಂತ ಗೊತ್ತಾದ ಮೇಲೆ ಮತ್ತೆ ಯಥಾಸ್ಥಿತಿಗೆ ಬರುತ್ತೇವೆ. ಅಂತಹ ಸಂದರ್ಭದಲ್ಲಿ ಮನಸ್ಸು ಚೆಂದದ ಪ್ರೀತಿಯ ಹೆಗಲಿಗಾಗಿ, ಪ್ರೇರಣೆಯ ಸವಿ ನುಡಿಗಳಿಗಾಗಿ ಹಾತೊರೆಯುವುದೂ ಅಷ್ಟೇ ಸತ್ಯ. ಹಾಗಾದರೆ ಪ್ರೇರಣೆ ಮತ್ತು ಸ್ಪೂರ್ತಿಗಿರುವ ವ್ಯತ್ಯಾಸವಾದರೂ ಏನು? ಸ್ಫೂರ್ತಿಯ ಕಡಲಲ್ಲಿ ತೇಲುವುದು ಹೇಗೆ ತಿಳಿಯೋಣ ಬನ್ನಿ.
ಪ್ರೇರಣೆ ‘ಪ್ರಪಂಚದಲ್ಲಿ ಶ್ರೀಮಂತಿಕೆಗಿಂತ ಬಡತನವೇ ಹೆಚ್ಚು ಪಾಠ ಕಲಿಸುತ್ತದೆ. ಸಂತೊಷದ ಸಂದರ್ಭಗಳಿಗಿಂತ ಕಷ್ಟದ ಸಂದರ್ಭಗಳು ನಮ್ಮಲ್ಲಿ ಅರಿವನ್ನು ಹೆಚ್ಚಿಸುತ್ತದೆ. ವಿವೇಕವನ್ನು ಬೆಳಗಿಸುತ್ತದೆ. ಸನ್ಮಾನಕ್ಕಿಂತ ಅವಮಾನ ವ್ಯಕ್ತಿಯಲ್ಲಿ ಒಂದು ಕಿಚ್ಚನ್ನು ಎಬ್ಬಿಸುತ್ತದೆ.’ ಸ್ವಾಮಿ ವಿವೇಕಾನಂದರ ಈ ನುಡಿಗಳು ಅದೆಷ್ಟು ಅದ್ಭುತವಾಗಿವೆ ಅಲ್ಲವೇ? ಸ್ವಯಂಸ್ಫೂರ್ತಿ ತೀರ ಅಗತ್ಯವಾದುದು. ಅಷ್ಟೇ ಅಲ್ಲ ತುಂಬಾ ಹೊಣೆಗಾರಿಕೆಯಿಂದ ಕೂಡಿದುದು. ಇಂತಹದರಲ್ಲಿಯೇ ಮುನ್ನಡೆಯುವುದು ಸಾಹಸದ ಕಾರ್ಯ. ಯಾವುದೇ ಪ್ರೇರಣಾತ್ಮಕ ನುಡಿಗಳು ಕಾರ್ಯ ನಿರ್ವಹಿಸುವುದು ಸ್ವಯಂ ಅರಿವು ಮೂಡಿದಾಗ ಮಾತ್ರ. ಕೆಲವು ನಡವಳಿಕೆಗಳನ್ನು ನಿರ್ವಹಿಸಲು ಕನಿಷ್ಟ ಪ್ರೇರಣೆ ಅಗತ್ಯವಾಗಿರುತ್ತದೆ. ಬೇರೆಯವರ ಮಾತಿನಿಂದ, ಸಾಧಕರ ಜೀವನದಿಂದ, ವಿವಿಧ ಕ್ಷೇತ್ರಗಳ ದಿಗ್ಗಜರಿಂದ ನಾವು ಮಾಡಲು ಬಯಸುವ ಎಲ್ಲವನ್ನೂ ಮಾಡುವ ಸಾಮರ್ಥ್ಯ ನಮ್ಮಲ್ಲಿದೆ ಎಂಬುದು ಮನವರಿಕೆಯಾಗುತ್ತದೆ. ಹೀಗೆ ಹೊರಗಿನಿಂದ ಪಡೆಯುವುದು ಪ್ರೇರಣೆ.
ಸ್ಫೂರ್ತಿ
ಕೆಲವು ಪದಗಳಿಂದ ಒಂದು ಸಾಲು. ಹಲವಾರು ಸಾಲುಗಳಿಂದ ಒಂದು ಪುಟ, ಸಾಲು ಸಾಲಾದ ಪುಟಗಳಿಂದ ಒಂದು ಪುಸ್ತಕ. ಕೆಲವು ಹೊತ್ತಿಗೆಗಳಿಂದ ಒಂದು ಮಹಾಗ್ರಂಥ. ಅಂತೆಯೇ ಪ್ರೇರಣೆಯ ಹಲವು ಸಾಲುಗಳು ಸ್ಫೂರ್ತಿಯ ಕಿಡಿಯನ್ನು ಹೊತ್ತಿಸುತ್ತವೆ. ಸ್ಫೂರ್ತಿ ಎಂಬುದು ಮನಸ್ಸಿನ ಒಂದು ಸ್ಥಿತಿ. ಕಣ್ಣಿಗೆ ಕಾಣದ ಚೈತನ್ಯ. ಸ್ವಯಂ ಸ್ಪೂರ್ತಿಯಿಂದ ನಮ್ಮ ಶಕ್ತಿ ದೌರ್ಬಲ್ಯಗಳನ್ನು ತಿಳಿದುಕೊಂಡು ತಿದ್ದಿಕೊಳ್ಳಲು ಬೆಳೆಯಲು ಅನೇಕ ಅವಕಾಶಗಳಿವೆ. ಪ್ರಪಂಚದಲ್ಲಿ ಎಲ್ಲಕ್ಕೂ ಮಿತಿಗಳಿವೆ ಎಂಬ ಅರಿವೂ ಇರಬೇಕು. ಭೂಮಿಯ ಮೇಲಿರುವ ನೀರು ಆವಿಯಾಗಿ ಆಕಾಶದಲ್ಲಿ ಗಟ್ಟಿಯಾಗಿ ಹರಡಿ ಮತ್ತೆ ಅದರಿಂದ ನೀರು ಹರಿಸುವ ಪ್ರಕ್ರಿಯೆಯಂತೆ ಸ್ಪೂರ್ತಿ. ಕಾರ್ಯ ಸಾಧನೆಗೆ ಸ್ವಯಂ ಸ್ಫೂರ್ತಿ ಬೇಕೇ ಬೇಕು.

ಕಟ್ಟಿಟ್ಟ ಬುತ್ತಿ
ತಮ್ಮ ದೃಢ ಸಂಕಲ್ಪದಿಂದ ಮತ್ತು ಸ್ವಯಂ ಸ್ಫೂರ್ತಿಯ ಬಲದಿಂದ ಅಸಾಧ್ಯವಾದುದನ್ನು ಸಾಧಿಸಿದವರ ಅನೇಕ ನೈಜ ಘಟನೆಗಳನ್ನು ಕಂಡಿದ್ದೇವೆ ಕೇಳಿದ್ದೇವೆ ಓದಿದ್ದೇವೆ. ಚಿಕ್ಕವರಿದ್ದಾಗ ಮಳೆಯ ನೀರಲ್ಲಿ ತೇಲಿಬಿಡುತ್ತಿದ್ದ ಕಾಗದದ ಪುಟ್ಟ ದೋಣಿಗಳು, ಎಲೆಯ ಮೇಲಿಟ್ಟು ದೀಪಗಳನ್ನು ತೇಲಿಬಿಡುವಾಗ ಎಲ್ಲಿಲ್ಲದ ಉತ್ಸಾಹವಿದ್ದೇ ಇರುತ್ತದೆ. ಅವು ಎಲ್ಲಿಯವರೆಗೆ ತೇಲಬಲ್ಲವು ಎಂದು ಕಾದು ನೋಡುವ ಕಾತುರವನ್ನಂತೂ ಹೇಳತೀರದು. ಬಾಲ್ಯದಿಂದ ಬೆಳೆಯುತ್ತ ಹೋದಂತೆ ಈ ಕಾತುರತೆ ಕಡಿಮೆಯಾಗುತ್ತದೆ. ಕುತೂಹಲದ ದಿನಗಳು ಮುಗಿಯುತ್ತವೆ. ಎಲ್ಲದಕ್ಕೂ ಹೊರಗಿನ ಪ್ರೇರಣೆ ಬೇಕೇ ಬೇಕಾಗುತ್ತದೆ. ಪ್ರೇರಣೆಯೆಂಬುದು ಕಟ್ಟಿಕೊಟ್ಟ ಬುತ್ತಿಯಂತೆ ಆದರೆ ಸ್ಫೂರ್ತಿ ನಾವೇ ಕಲಿತು ಮಾಡಿಕೊಳ್ಳುವ ಅಡುಗೆಯಂತೆ. ಆದ್ದರಿಂದ ಗುರಿ ಸಾಧನೆಯ ಹೆಜ್ಜೆಗಳಲ್ಲಿ, ದೈನಿಕ ಕೆಲಸಗಳಲ್ಲಿ ಪ್ರೇರಣೆಗಿಂತ ಸ್ಪೂರ್ತಿಯ ಸೆಲೆಯನ್ನು ಅವಲಂಬಿಸುವುದು ಸೂಕ್ತ.
ದೊಡ್ಡ ಸಹಾಯ
ಅನೇಕ ಜನರಲ್ಲಿ ಯಾರೊ ನಮ್ಮನ್ನು ಪ್ರೇರಣೆಗೊಳಿಸಿದರೆ ಬದುಕು ಬದಲಾಗುತ್ತದೆ ಎನ್ನುವ ಹಳೆಯ ಪ್ರಜ್ಞೆಯು ಇನ್ನೂ ಆಳವಾಗಿ ಬೇರೂರಿದೆ. ಬದಲಾಗಬೇಕೆನ್ನುವ, ಬೆಳೆಯಬೇಕೆನ್ನುವ ತಲೆಯಲ್ಲಿರುವ ದನಿಯೊಡನೆ ಗುರುತಿಸಿದರೆ ಚಿಂತನಾ ಲಹರಿಯು ತಾನೇ ತಾನಾಗಿ ಸ್ವಯಂ ಸ್ಪೂರ್ತಿಯತ್ತ ಹೊರಳುತ್ತದೆ. ಅಜ್ಞಾನ, ಆಲಸಿತನ, ಅನನುಭವಗಳು ದುಃಖವನ್ನು ಉತ್ಪಾದಿಸುವ ಫ್ಯಾಕ್ಟರಿಗಳಿದ್ದಂತೆ. ಉತ್ಸಾಹ ಉಲ್ಲಾಸಗಳು ಯಶಸ್ವಿ ಬದುಕಿಗೆ ಬಂಡವಾಳವಿದ್ದಂತೆ. ಸ್ಫೂರ್ತಿ ಬದುಕಿನ ಜೀವಾಳ. ಸಾಧ್ಯವಿದ್ದ ಮಟ್ಟಿಗೆ ಸ್ಫೂರ್ತಿಯಿಂದ ಇರುವುದೇ ನಮಗೆ ನಾವು ಮಾಡಿಕೊಳ್ಳುವ ದೊಡ್ಡ ಸಹಾಯ. ಜ್ಞಾನಾನುಭವ, ಕ್ರಿಯೆ, ಚಟುವಟಿಕೆಗಳು ಸುಖದ ಆಗರಗಳಿದ್ದಂತೆ. ಇವೆಲ್ಲವನ್ನು ವಿಚಾರಧಾರೆಗಳಲ್ಲಿ ಕ್ರಿಯಾತ್ಮಕತೆಯಲ್ಲಿ ಬೆಳೆಸಿಕೊಳ್ಳುವುದು ಮುಖ್ಯ. ಬದುಕು ಕೇವಲ ಬೆಳೆಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ನಿಚ್ಚಳವಾಗಿ ಸಮಸ್ಯೆಗಳಲ್ಲಿ ವಾಸ್ತವಿಕತೆಯನ್ನು ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ವಾಸ್ತವಿಕತೆಯನ್ನು ಅರಿತುಕೊಳ್ಳದಿದ್ದರೆ ಹೊಸ ಅರಿವು ಹೊಳೆಯದು. ಹೊಳೆಯದಿದ್ದರೆ ತಿಳಿಯದು. ನಿರಂತರ ಸ್ಫೂರ್ತಿಯ ಸೆಲೆಗೆ ಆಳವಾದ ಅಧ್ಯಯನ ಅಗಲವಾದ ಅನುಭವ ಅಗತ್ಯ.

ನೀರಿನಂತೆ
ಅದೆಲ್ಲ ಸರಿ ಈ ಸ್ಪೂರ್ತಿಯನ್ನು ಸತತವಾಗಿ ಕಾಪಿಟ್ಟುಕೊಳ್ಳುವುದು ಸಾಮಾನ್ಯವಾಗಿ ಸಾಧ್ಯವಾಗುವುದಿಲ್ಲ. ಸ್ಫೂರ್ತಿಯನ್ನು ಜತೆಗಿರಿಸಿಕೊಳ್ಳುವ ಪ್ರಯತ್ನ ಇರಬೇಕಾದ ಮಟ್ಟದಲ್ಲಿ ಇರದಿದ್ದರೆ ಅದು ಕಷ್ಟದ ಕೆಲಸ. ಬಂದದ್ದೇ ಭಾಗ್ಯ ಬಂದಷ್ಟೇ ಬಹಳ ಎಂದು ಅಂದುಕೊಂಡು ಅಷ್ಟಕ್ಕೇ ಸುಮ್ಮನಿದ್ದು ಬಿಡಬೇಕಾಗುತ್ತದೆ. ವೇಗದ ಬದುಕಿನಲ್ಲಿ ಎಲ್ಲೆಲ್ಲೂ ವಿಷಮ ವಾತಾವರಣ,ಅಸಮ ಜೀವನ, ಎಲ್ಲದಕ್ಕೂ ಥಕಪಕ ಕುದಿಯುವ ಹೃದಯ ಇಷ್ಟೆಲ್ಲ ಇರುವಾಗ ಸ್ಪೂರ್ತಿ ಎಲ್ಲಿಯದು? ಎನ್ನುವ ಮಾತುಗಳು ಕೇಳಿ ಬರುತ್ತವೆ. ಕೃತಕವಾಗಿ ಮೆರೆಯುವ ಅಸಹನೀಯ ವಾತಾವರಣದಲ್ಲಿ ಸ್ಪೂರ್ತಿಗೆ ಅವಕಾಶವಿದೆಯೇ? ಈ ದುರ್ಭರ ಸನ್ನಿವೇಶದಲ್ಲಿ ಜೀವನಕ್ಕೆ ಗಟ್ಟಿಯಾಗಲು ಬೇಕಾಗುವ ನವಜೀವನದ ಪ್ರೇರಣೆಯ ಪರಿಣಾಮಗಳು ಎನಿತೆಂದು ತಿಳಿದು ನೋಡಿದರೆ, ಪ್ರೇರಣೆಯ ಮೇಲೆ ನಾವು ಜೀವನವನ್ನು ಸಾಗಿಸಲು ನೋಡುತ್ತಿದ್ದೇವೆ ಎಂಬುದು ಖಚಿತವಾಗುತ್ತದೆ. ಸ್ಪೂರ್ತಿಯತ್ತ ಹೆಚ್ಚು ಗಮನ ಹರಿಸುತ್ತಿಲ್ಲ ಎನ್ನುವ ಸ್ಪಷ್ಟ ಚಿತ್ರಣ ಕಣ್ಮುಂದೆ ರಾಚುತ್ತದೆ. ಪ್ರೇರಣೆಯೆಂಬುದು ಬೊಗಸೆಯಲ್ಲಿ ಹಿಡಿದ ನೀರಿನಂತೆ ಸೋರಿ ಹೋಗಿ ಬಿಡುತ್ತದೆ. ಆದ್ದರಿಂದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬಲ್ಲ ಜೀವನದ ಮೈಲಿಗಲ್ಲು ಸ್ಥಾಪಿಸಬಲ್ಲ ಸ್ಫೂರ್ತಿಯತ್ತ ವಾಲುವುದು ಒಳಿತು.
ಕೊನೆ ಹನಿ
ಬದುಕಿನಲ್ಲಿ ಸೋಲು ಗೆಲುವು ನೋವು ನಲಿವು ಅನ್ನುವುದು ಇದ್ದೇ ಇರುತ್ತವೆ. ಅವುಗಳ ನಡುವೆ ಬದುಕಿನ ಬಂಡಿಯನ್ನು ಸ್ಪೂರ್ತಿಯ ಇಂದನದಿಂದ ಸಾಗಿಸುತ್ತ ನಾವು ಅಂದುಕೊಂಡಿದ್ದನ್ನು ಸಾಧಿಸಿದರೆ, ಕ್ರಿಯಾ ಕುಸುಮವನ್ನು ಅರಳಿಸಬಲ್ಲೆವು. ಆಗ ಬದುಕಿಗೆ ಅಮೋಘ ಬೆಲೆ ದೊರೆಯುತ್ತದೆ ಎಂಬುದು ಸೂರ್ಯ ಪ್ರಕಾಶದಷ್ಟೇ ಸತ್ಯ. ಸ್ವಯಂ ಸ್ಫೂರ್ತಿಯಿಂದ ಬದುಕಿನ ಗತಿ ಸುಲಭವಾಗುತ್ತದೆ; ಸರಳವಾಗುತ್ತದೆ ಫಲಭರಿತ ವೃಕ್ಷದಂತಾಗುತ್ತದೆ. ಆಹಾ! ಸ್ಪೂರ್ತಿಯಿದ್ದರೆ ಬದುಕು ಅದೆಷ್ಟು ಸೊಗಸು ಎಂದನಿಸದೇ ಇರದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ