ಜೀವನ ನೋಡುವುದಲ್ಲ, ನಿರ್ಮಿಸಿಕೊಳ್ಳುವುದು

ಜಯಶ್ರೀ ಜೆ. ಅಬ್ಬಿಗೇರಿ

ಹಾಗೆ ನೋಡಿದರೆ ನೋವು ಕಾಣದ ವ್ಯಕ್ತಿ ಜಗದಲ್ಲಿ ಯಾರೂ ಇಲ್ಲ. ಬಾಯಲ್ಲಿ ಬಂಗಾರದ ಚಮಚ ಇಟ್ಟುಕೊಂಡು ಹುಟ್ಟಿದವನು ನೋವಿನ ಸುಳಿಯಲ್ಲಿ ಒಮ್ಮಿಲ್ಲೊಮ್ಮೆ ಸಿಲುಕಿ ಹಾಕಿಕೊಳ್ಳುತ್ತಾನೆ. ವಿಷಾದಕರವಾದ ಗತದಿಂದ ತೊಳಲಾಡುತ್ತಿರುತ್ತಾನೆ. ಪ್ರತಿಯೊಬ್ಬರೂ ನೋವಿನಿಂದ ಕೂಡಿದ ಗತಕಾಲದ ಸನ್ನಿವೇಶಗಳನ್ನು ಹೊಂದಿರುತ್ತೇವೆ. ನೈಜ ಬದುಕಿನಲ್ಲಿ ಕೆಲವು ದೋಷಗಳು ಭ್ರಮೆಗಳಿಂದ ಕೂಡಿದ ನೆನಪುಗಳು ನಮ್ಮನ್ನು ಆಳುತ್ತವೆ ಎಂಬುದು ಸುಳ್ಳಲ್ಲ. ಅವಶ್ಯಕತೆಗಿಂತ ಹೆಚ್ಚು ಚಿಂತಿಸಿ ಕೈಯಲ್ಲಿರುವ ಸುವರ್ಣ ಅವಕಾಶಗಳ ಬೆಲೆ ತಿಳಿಯದೇ ಮೂಢರಂತೆ ಪರದಾಡವವರಿಗೂ ಕಡಿಮೆಯೇನಿಲ್ಲ. ನಾನೇ ಬುದ್ಧಿವಂತ ಎಂದು ಅಹಂಕಾರದಿಂದ ಮೆರೆವ ವ್ಯಕ್ತಿಯೂ ತಾನಂದುಕೊಂಡಿದ್ದನ್ನು ಸಾಧಿಸಲಿಲ್ಲ ಎನ್ನುವ ದುಃಖದಿಂದ ಬಳಲುತ್ತಿರುತ್ತಾನೆ. ಒಳಗೊಳಗೆ ಅಪರಾಧ ಭಾವದಿಂದ ಬೇಯುತ್ತಿರುತ್ತಾನೆ. ನಾನು ದಡ್ಡ ನನಗೆ ಇತರರಂತೆ ನಾನಂದುಕೊಂಡದ್ದನ್ನು ಸಾಧಿಸಲಾಗುತ್ತಿಲ್ಲವೆಂದು ತಮ್ಮ ಅಸಮರ್ಥತೆಯನ್ನು ಮುಂದಿಟ್ಟುಕೊಂಡು ಕಣ್ಣೀರು ಸುರಿಸುವವರು ಕಾಣ ಸಿಗದೇ ಇರುವುದಿಲ್ಲ. ಜಗದ ಜನರ ಸ್ಪರ್ಧೆಗೆ ಸ್ಪರ್ಧಿಸುವುದು ನನ್ನ ಕೈಲಿಂದಾಗದೆಂದು ಬಸವನ ಹುಳುವಿನಂತೆ ಸಿಂಬಳ ಸುರಿಸುತ್ತಾರೆ. ಪ್ರಯತ್ನ ಮಾಡದೇ ಇದ್ದು ಬಿಡುವುದನ್ನು ರೂಢಿಸಿಕೊಂಡು ನನ್ನ ದುರಾದೃಷ್ಟ ಎಂದು ಅಳುತ್ತಾರೆ. ಈ ಎಲ್ಲ ಪ್ರಕಾರದ ದೋಷಗಳು ತುಂಬಿದ ಕಣ್ಣು ಹನಿಗಳಿಗೆ ದಾರಿ ಮಾಡುತ್ತೇವೆ. ಸುರಕ್ಷಿತ ವಲಯವನ್ನು ಬಿಟ್ಟು ಹೊರ ಬರದಂತೆ ಕಟ್ಟಿ ಹಾಕುತ್ತವೆ.
ಪ್ರತಿಯೊಂದು ನಾವಂದುಕೊಂಡಂತೆ ನಡೆಯಬೇಕು. ಆದರೆ ಬೆವರು ಹರಿಸಲಾರೆವು ಎನ್ನುವ ಭಾವ ಬೆರೆತು ಮತ್ತಷ್ಟು ಸಮಸ್ಯೆಗಳನ್ನು ಕೈ ಬೀಸಿ ಕರೆಯುತ್ತದೆ. ನಾವು ಮಾಡುವ ಕೆಲಸದ ಮೇಲೆ ಕ್ರಮದ ಮೇಲೆ ಹಿಡಿತ ಸಾಧಿಸದೇ ಇರುವುದೇ ವಿಫಲತೆಗೆ ಮುಖ್ಯ ಕಾರಣ ಎಂಬುದನ್ನು ಗ್ರಹಿಸದೇ ಹೋಗುತ್ತೇವೆ. ಗ್ರಹಿಕೆಯ ದೋಷದಿಂದ ಮೂಢರಾಗುತ್ತೇವೆ. ಯಮಪಾಶ ಕೊರಳಿಗೆ ಬರುವ ಮುನ್ನವೇ ಏನನ್ನಾದರೂ ಸಾಧಿಸಬೇಕು. ಸಾವು ಯಾರಿಗೂ ತಪ್ಪಿದ್ದಲ್ಲ. ಕೊನೆಯ ಕರೆ ಯಾವಾಗ ಬರುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಶಾಶ್ವತವಲ್ಲದ ಬದುಕಿನಲ್ಲಿ ಶಾಶ್ವತವಾಗಿ ಉಳಿಯುವಂಥದ್ದನ್ನು ಮಾಡಬೇಕೆಂದು ಬೀಸುವ ಗಾಳಿಯಲ್ಲಿ ಕೊಚ್ಚಿ ಹೋಗುವುದು ಎಷ್ಟು ಸರಿ? ಹೇಗಿದ್ದರೂ ಒಂದು ದಿನ ಸಾಯುವುದಿದೆ. ಶ್ರಮವಹಿಸಿ ಏನು ಮಾಡುವುದಿದೆ? ಇರುವಷ್ಟು ದಿನ ಹಾಯಾಗಿರೋಣ ಎನ್ನುವ ಜಾಯಮಾನವೂ ತೊಂದರೆಗೆ ಸಿಕ್ಕಿಸದೇ ಬಿಡುವುದಿಲ್ಲ. ಹೀಗೆ ಸತ್ತವರಂತೆ ಬದುಕುವುದಾದರೂ ಏಕೆ? ಎಂಬ ಪ್ರಶ್ನೆಯನ್ನು ಹಾಕಿಕೊಂಡರೆ ಜೀವನ ನಿರ್ಮಿಸಿಕೊಳ್ಳಬಹುದು. ಹೂ ಒಂದು ದಿನ ಇಲ್ಲವೇ ಕೆಲ ಗಂಟೆಗಳ ಮಾತ್ರ ಬದುಕುತ್ತದೆ ಆದರೂ ಬದುಕಿನ ಸಾರ್ಥಕತೆಯನ್ನು ತಲುಪುತ್ತದೆ. ಹಾರುವ ಚಿಟ್ಟೆಯೂ ಇದರಿಂದ ಹಿಂದೆ ಬಿದ್ದಿಲ್ಲ.
ಜೀವನ ನೀನು ನೋಡುವುದಲ್ಲ, ನೀನೇ ನಿರ್ಮಿಸಿಕೊಳ್ಳುವುದು ಎಂದಿದ್ದಾನೆ ಬರ್ಟ್ರೆಂಡ್ ರಸೆಲ್. ಆದ್ಯತೆಗಳು ಆಲೋಚನೆಗಳು ನಮ್ಮನ್ನು ರೂಪಿಸುತ್ತವೆ. ಹೀಗಾಗಿ ಅವುಗಳನ್ನು ನಮ್ಮ ಅಂಕೆಯಲ್ಲೇ ಇಟ್ಟುಕೊಳ್ಳಬೇಕು. ಹಾಗಾದಾಗ ಭಯ ಶಂಕೆಯಿಂದ ಹೊರಬರಲು ಸಹಕಾರಿ. ಇದು ಒಳಗಣ್ಣು ತೆರೆಯಿಸಿ ಗುರಿ ಮುಟ್ಟುವತ್ತ ತನ್ನ ನೆರವಿನ ಹಸ್ತವನ್ನು ಚಾಚುತ್ತದೆ. ನಾಯಕರು ತಮ್ಮನ್ನು ತಾವು ಸೃಷ್ಟಿಸಿಕೊಂಡಿದ್ದಾರೆಯೇ ಹೊರತು ಅವರು ಹುಟ್ಟಿನಿಂದ ನಾಯಕರಲ್ಲ. ಬುದ್ಧಿ ಕೌಶಲ್ಯಗಳಿರುವವನು ಯಾವುದೇ ಒಂದು ವಿಷಯದಲ್ಲಿ ಪರಿಣಿತಿ ಸಾಧಿಸಿದ ನಾನು ಹೇಗೆ ಬೇಕಾದರೂ ಬದುಕು ಕಟ್ಟಿಕೊಳ್ಳುವೆನೆಂಬ ದುರಭಿಪ್ರಾಯ ನಮ್ಮಲ್ಲಿದೆ. ಆದರೆ ಇದು ತಪ್ಪು. ಅನಿರೀಕ್ಷಿತಗಳಿಗೆ ಅವಕಾಶ ಕೊಡುವವನು ಬದುಕನ್ನು ಚೆನ್ನಾಗಿ ಕಟ್ಟಿಕೊಳ್ಳಬಲ್ಲ. ತನ್ನ ಭಾವನೆಗಳ ಮೇಲೆ ಹತೋಟಿ ಇಟ್ಟುಕೊಂಡವನು ಚೆಂದದ ಜೀವನ ಹೊಂದುತ್ತಾನೆ. ಬದುಕಿನ ಸಂಘರ್ಷಗಳಿಗೆ ಹೋರಾಟಗಳಿಗೆ ಸಮಸ್ಯೆಗಳಿಗೆ ಬೆನ್ನು ತೋರಿದವನು ಯಾವತ್ತೂ ಅರ್ಥಪೂರ್ಣವಾದ ಬದುಕನ್ನು ಸೃಷ್ಟಿಸಿಕೊಳ್ಳಲಾರರು. ಕೆಟ್ಟ ಆಲೋಚನೆಗಳು ಮೆದುಳಿನಲ್ಲಿ ನುಸಳದಂತೆ ತಡೆಯುವುದು ನಮ್ಮ ಕೈಯಲ್ಲೇ ಇದೆ. ಸಾವು ನೋವನ್ನು ನಿಯಂತ್ರಿಸಲಾರೆವು. ಆದರೆ ಬದುಕು ಭಾವವನ್ನು ಖಂಡಿತ ನಿಯಂತ್ರಿಸಬಲ್ಲೆವು. ಕ್ರಿಯೆಗೆ ಸಮಸ್ಯೆಗಳಿಗೆ ಪ್ರತಿಸ್ಪಂದಿಸುವ ರೀತಿಯೂ ಬದುಕಿಗೆ ಹಸಿರು ತೋರಣ ಕಟ್ಟಬಲ್ಲದು. ದೋಷಗಳಿಂದ ಹೊರ ಬಿದ್ದು ಹಿರಿಮೆ ಗರಿಮೆ ಹೊಂದಿದ ಬದುಕಿನ ಗರಿಯನ್ನು ಬಿಚ್ಚಿ ಬಾನೆತ್ತರಕ್ಕೆ ಜಿಗಿಯಬಲ್ಲೆವು!!

(ಲೇಖಕರು – ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button