Belagavi NewsBelgaum NewsKannada NewsKarnataka NewsLatest

*ಆಧುನಿಕ ವಿದ್ಯಮಾನಗಳ ಮೇಲಾಟದಲ್ಲಿ ನಮ್ಮ ಜನಪದ ಮರೆಯದೇ ಇರೋಣ: ಡಾ.ಪ್ರಭಾಕರ ಕೋರೆ*

ಲಿಂಗರಾಜ ಮಹಾವಿದ್ಯಾಲಯದಲ್ಲಿ ವೈಭವದ ಕನ್ನಡ ಹಬ್ಬ ಜನಪದೋತ್ಸವ ಸಮಾರಂಭ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮೊಬೈಲ್ ಹಾಗೂ ಇತರ ಮಾಧ್ಯಮಗಳ ಹಾವಳಿಯಿಂದ ನಮ್ಮ ಜನಪದವನ್ನು ನಮ್ಮ ಹಳ್ಳಿಯ ಸೊಗಡನ್ನು ಮರೆತಿದ್ದೇವೆ. ನಮ್ಮ ನಾಡಿನ ಪರಂಪರೆಯ ಧೋತ್ಯಕವಾದ ಜನಪದ ಸಾಹಿತ್ಯ ಕಲೆಗಳನ್ನು ಪೋಷಿಸಿ ಬೆಳೆಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವೆಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು.

ಅವರು ಲಿಂಗರಾಜ ಮಹಾವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ್ದ ಕನ್ನಡ ಹಬ್ಬ ನಿಮಿತ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಜನಪದ ಸ್ಪರ್ಧೆಗಳನ್ನು ಆಯೋಜಿಸಿ ಮಾತನಾಡಿದರು. ನಾವೆಲ್ಲರೂ ಬಾಲ್ಯದಲ್ಲಿ ನಮ್ಮ ತಾಯಿಯ ಜೋಗುಳ ಪದಗಳನ್ನು ಕೇಳಿ ಬೆಳೆದವರು. ನಾನು ಹುಟ್ಟಿ ಬೆಳೆದಿದ್ದು ಅಂಕಲಿಯ ಗ್ರಾಮೀಣ ಪರಿಸರದಲ್ಲಿ. ಹಳ್ಳಿಯ ವಾತಾವರಣ ನಮ್ಮ ಬದುಕನ್ನು ಸುಂದರಗೊಳಿಸಿತು. ನಮ್ಮ ಗ್ರಾಮೀಣ ಪರಿಸರ ಸಂಪೂರ್ಣವಾಗಿ ಜನಪದವೇ ಎನಿಸಿದೆ. ಇಂದು ನಗರಗಳಿಗೆ ಬಂದು ನಮ್ಮ ಗ್ರಾಮೀಣ ಬದುಕನ್ನು ಮರೆತಿದ್ದೇವೆ. ನಮ್ಮ ಉಡಿಗೆ ತೊಡುಗೆ ಊಟ ಎಲ್ಲವೂ ಜನಪದ ಇದ್ದರೆ ಚಂದ. ನಮ್ಮ ಹಳ್ಳಿಯ ಬದುಕು ಬಲು ಸುಂದರ. ಅದನ್ನು ನಾವು ಮರೆಯಬಾರದುಎಂದು ಹೇಳಿದರು.

ಜನಪದ ಸಾಹಿತ್ಯ ಕನ್ನಡ ಸಾಹಿತ್ಯದ ತಾಯಿ ಬೇರು, ಶಾಲೆಯ ಕಟ್ಟೆಯನ್ನೂ ಏರದ ನಮ್ಮ ಜನಪದರು ಸಾಹಿತ್ಯವನ್ನು ರಚಿಸಿ ಶ್ರೀಮಂತಗೊಳಿಸಿದರು. ಅಂತಹ ಸಾಹಿತ್ಯವನ್ನು ಜೀವಂತವಾಗಿಡುವ ಕಾರ್ಯ ಎಲ್ಲ ಕನ್ನಡ ಮನಸ್ಸುಗಳಿಂದ ನಡೆಯಬೇಕಾಗಿದೆ ಎಂದು ತಿಳಿಸಿದರು. ಲಿಂಗರಾಜ ಕಾಲೇಜು ಶತಮಾನೋತ್ಸವ ಹೊಸ್ತಿಲಲ್ಲಿದೆ. ಗಡಿಭಾಗದಲ್ಲಿ ಈ ಮಹಾವಿದ್ಯಾಲಯದ ಕನ್ನಡವನ್ನು ಕಟ್ಟುವ ಹಾಗೂ ಬೆಳೆಸುವ ಕಾರ್ಯವನ್ನು ಅವ್ಯಾಹತವಾಗಿ ಮಾಡಿಕೊಂಡು ಬಂದಿದೆ. ಅನೇಕ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಕನ್ನಡಕ್ಕಾಗಿ ಅಹೋರಾತ್ರಿ ಶ್ರಮಿಸಿದ್ದಾರೆ. ಇಂದು ಬೆಳಗಾವಿಯಲ್ಲಿ ಕನ್ನಡ ಗಟ್ಟಿಯಾಗಿ ನೆಲೆಸಿದ್ದರೆ ಈ ಮಹಾವಿದ್ಯಾಲಯದ ಹಿಂದಿನವರ ಹೋರಾಟ ಅವಿಸ್ಮರಣೀಯವೆಂದು ಹೇಳಿದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಅವರು ಮಾತನಾಡಿ, ಭಾಷಾವಾರು ಪ್ರಾಂತಗಳ ರಚನೆಯಾದ ನಂತರ ಕನ್ನಡ ನಾಡು ಅಸ್ತಿತ್ವಕ್ಕೆ ಬಂದಿತು. ಅನೇಕ ಮಹನೀಯರಿಂದ ತ್ಯಾಗದಿಂದ ಸ್ಥಾಪಗೊಂಡ ಕನ್ನಡವನ್ನು ಪೋಷಿಸಿ ಬೆಳೆಸಬೇಕಾಗಿದೆ. ನಾಡಿನ ಸಾಂಸ್ಕೃತಿಕ ವಲಯಕ್ಕೆ ಲಿಂಗರಾಜ ಕಾಲೇಜಿನ ಕೊಡುಗೆ ಅಪಾರ. ಕನ್ನಡ ಭಾಷೆಯ ಅಸ್ಮಿತೆ ಹೋರಾಟ ನಡೆಸಿದ ಈ ಮಹಾವಿದ್ಯಾಲಯವುತನ್ನಗರ್ಭದಲ್ಲಿ ಇಂದಿಗೂ ಕನ್ನಡತನವನ್ನು ಪೋಷಿಸಿಕೊಂಡು ಬಂದಿದೆ. ಮಾತೃಭಾಷೆ ಇಂದಿನ ಹೊಸ ಶಿಕ್ಷಣದ ತಳಹದಿಯಾಗಿದ್ದು ಆ ನಿಟ್ಟಿನಲ್ಲಿ ಮತ್ತಷ್ಟು ರಚನಾತ್ಮಕ ಕಾರ್ಯಗಳನ್ನು ಮಾಡಲು ಸಾಧ್ಯವೆಂದು ಹೇಳಿದರು.

ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀ ಕನ್ನಡ ವಿಭಾಗದ ಕಾರ್ಯಾಧ್ಯಕ್ಷರಾದ ಡಾ.ಎಸ್.ಎಂ.ಗಂಗಾಧರಯ್ಯ ಅವರು ಮಾತನಾಡಿ, ಜನಪದ ಕಲೆ ಇಂದುಯುಗದ ಫಲ್ಲಟಗಳಿಗೆ ಮರೆಯಾಗುತ್ತಿರುವ ಸಮಯದಲ್ಲಿ ಅದನ್ನು ಅಗತ್ಯವಾಗಿ ಉಳಿಸುವ ಗುರುತರ ಜವಾಬ್ದಾರಿ ಎಲ್ಲರದೂ ಇದೆ. ನಮ್ಮ ಸಂಸ್ಕೃತಿಯ ಸೂಕ್ಷ್ಮ ಸಂವೇದನೆಗಳು ಜನಪದಗಳಲ್ಲಿ ಅಡಗಿರುವುದು ವಾಸ್ತವ. ಅದು ಮುಂದಿನ ಪೀಳಿಗೆಗೂ ಕೊಂಡೊಯ್ಯದು ಜೀವಂತಗೊಳಿಸುವಂತಾಗಬೇಕೆಂದು ವಿದ್ಯಾರ್ಥಿಗಳಿಗೆ ಕರೆನೀಡಿದರು.

ಡಾ.ಎಚ್.ಎಂ.ಚನ್ನಪ್ಪಗೋಳ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ರಾಣಿಚನ್ನಮ್ಮ ಮಹಿಳಾ ಬ್ಯಾಂಕಿನ ಕಾರ್ಯಾಧ್ಯಕ್ಷರಾದ ಶ್ರೀಮತಿ ಆಶಾ ಪ್ರಭಾಕರ ಕೋರೆ, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಸುಧಾ ಉಪ್ಪಿನ, ಪ್ರಶಾಂತ ಖೋತ, ಶ್ರೀಮತಿ ರಾಜೇಶ್ವರ ಸಂಬರಗಿಮಠ, ಉಪಸ್ಥಿತರಿದ್ದರು. ಡಾ.ಮಹೇಶ ಗುರನಗೌಡರ ಹಾಗೂ ಪ್ರೊ.ಸಿದ್ಧನಗೌಡ ಪಾಟೀಲ ನಿರೂಪಿಸಿದರು.ಡಾ.ರೇಣುಕಾಕಠಾರಿ ವಂದಿಸಿದರು.

ಮೊಳಗಿದ ಮಂಗಳ ಕನ್ನಡ ಜಯಭೇರಿ:
ಎಲ್ಲಿ ನೋಡಿದರೂ ಲಿಂಗರಾಜ ಕಾಲೇಜಿನ ಆವರಣದಲ್ಲಿ ಕನ್ನಡಕಲರವ. ನಾಡದೇವಿ ತಾಯಿ ಭುವನೇಶ್ವರಿಯ ಭವ್ಯವಾದ ಮೆರವಣಿಗೆ. ಡಾ.ಪ್ರಭಾಕರಕೋರೆ ಹಾಗೂ ಮಹಾಂತೇಶ ಕವಟಗಿಮಠ ನಾಡದೇವಿ ಪ್ರತಿಮೆಗೆ ಪೂಜೆಯನ್ನು ಸಲ್ಲಿಸಿ ಚಾಲನೆ ನೀಡಿದರೆ, ಕುಂಭವನ್ನು ಹೊತ್ತ ವಿದ್ಯಾರ್ಥಿನಿಯರು ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದರು. ಅಷ್ಟದಿಕ್ಕುಗಳಿಗೆ ಮಾರ್ದನಿಸಿದ ಡೊಳ್ಳು ಕುಣಿತ, ಕನ್ನಡ ಧ್ವಜಗಳ ಹಾರಾಟ ಕರ್ನಾಟಕ ರಾಜ್ಯೋತ್ಸವವನ್ನು ಮೆಲುಕು ಹಾಕುವಂತೆ, ಕನ್ನಡಾಂಬೆಯ ಘೋಷಣೆಗಳನ್ನು ಹಾಕುತ್ತ, ಜ್ಞಾನಪೀಠ ಪುರಸ್ಕೃತ ಭಾವಚಿತ್ರಗಳನ್ನು ಪ್ರದರ್ಶಸುತ್ತ ಅಸಂಖ್ಯ ವಿದ್ಯಾರ್ಥಿಗಳು ಭಾಷೆಗಳಾಚೆ ಮಿಂದೆದ್ದರು. ಎಲ್ಲ ಭಾಷಾ ವಿದ್ಯಾರ್ಥಿಗಳು ಕನ್ನಡಮ್ಮನ ರಥವನ್ನು ಎಳೆದು ಸಂತೋಷದ ಕಡಲಲ್ಲಿ ಮುಳುಗಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಜನಪದ ಉಡುಗೆ ತೊಡುಗೆಗಳಿಂದ ಶೋಭಾಯಮಾನವಾಗಿ ಕಂಡರು. ಎಲ್ಲಿ ನೋಡಿದರೂ ಹಳ್ಳಿಯ ಸೊಗಡು ಕಣ್ಮಮನ ಸೆಳೆಯಿತು. ರಾಜ್ಯದ ಮೂವತ್ತಕ್ಕೂ ಹೆಚ್ಚು ವಿವಿಧ ಕಾಲೇಜುಗಳಿಂದ ಜನಪದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಕನ್ನಡ ಹಬ್ಬದಲ್ಲಿ ಹೊಸತವನ್ನು ಕಂಡರು. ಅಕ್ಷರಶಃ ಲಿಂಗರಾಜ ಕಾಲೇಜು ಗತಕನ್ನಡದ ವೈಭವವನ್ನು ಮತ್ತೊಮ್ಮೆ ಅನಾವರಣಗೊಳಿಸಿತ್ತು. ಅಸಂಖ್ಯ ಕನ್ನಡಾಭಿಮಾನಿಗಳ ಮನಸ್ಸನ್ನು ಹೃದಯವನ್ನು ಸೂರೆಗೊಂಡಿತ್ತು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button