Latest

*ಕೇವಲ ಮೂರು ಗಂಟೆಯಲ್ಲಿ ಬೆಳಗಾವಿಯಿಂದ ಬೆಂಗಳೂರು ತಲುಪಿದ ಯಕೃತ್‌!*

ಅಂಗಾಂಗ ಕಸಿಯಲ್ಲಿ ಮತ್ತೊಂದು ಮೈಲಿಗಲ್ಲು: ಬೆಳಗಾವಿಯಿಂದ ಬೆಂಗಳೂರಿಗೆ ಯಕೃತ್‌ ತಡೆ ರಹಿತ ರವಾನೆ: ಸಾವಿನಲ್ಲೂ ಶ್ರೇಷ್ಠತೆ ಸಾರಿದ 16 ವರ್ಷದ ಬಾಲಕ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಬೆಂಗಳೂರಿನ ಸ್ಪರ್ಷ್‌ ಆಸ್ಪತ್ರೆ 63 ವರ್ಷದ ರೋಗಿಯೊಬ್ಬರಿಗೆ ಸಾವಿನಲ್ಲೂ ಸಾರ್ಥಕತೆ ಮೆರೆದ 16 ವರ್ಷದ ಬಾಲಕನ ಯಕೃತ್‌ ಕಸಿ ಮಾಡಿ ಜೀವದಾನ ನೀಡಿದೆ.

ಬುಧವಾರ ಬೆಳಗಾವಿಯಿಂದ ತಡೆ ರಹಿತ ಸಂಚಾರದ ಮೂಲಕ ಕೇವಲ 3 ಗಂಟೆಯಲ್ಲಿ ಬೆಂಗಳೂರಿನ ಯಶವಂತಪುರದ ಸ್ಪರ್ಷ್‌ ಆಸ್ಪತ್ರೆ ತಲುಪಿದ ಬಾಲಕನ ಯಕೃತ್‌ ಸನ್ನದ್ಧವಾಗಿ ನಿಂತಿದ್ದ ಪರಿಣಿತ ಕಸಿ ತಜ್ಞ ವೈದ್ಯರ ತಂಡದಿಂದ ಯಕೃತ್‌ಗಾಗಿ ಕಳೆದೊಂದು ವರ್ಷದಿಂದ ಕಾಯುತ್ತಿದ್ದ ರೋಗಿಯ ದೇಹಕ್ಕೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ.

ಬೆಂಗಳೂರು ಸ್ಪರ್ಷ್‌ ಆಸ್ಪತ್ರೆಯ ವೈದ್ಯಕೀಯ ತಂಡ, ಕರ್ನಾಟಕ ರಾಜ್ಯ ಅಂಗಾಂಗ ಮತ್ತು ಜೀವಕೋಶ ಕಸಿ ಪ್ರಾಧಿಕಾರ ʼಜೀವನ ಸಾರ್ಥಕತೆʼ ಮತ್ತು ಇಂಡಿಗೋ ಏರ್‌ಲೈನ್ಸ್‌ನ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಪೊಲೀಸರು, ಸಂಚಾರಿ ಪೊಲೀಸರ ನೆರವಿನೊಂದಿಗೆ ಗ್ರೀನ್‌ ಕಾರಿಡಾರ್‌ (ಝೀರೋ ಟ್ರಾಫಿಕ್‌ ) ಮೂಲಕ ಯಕೃತ್‌ನ್ನು ಯಾವುದೇ ಅಡೆತಡೆಯಿಲ್ಲದೇ ಶರವೇಗದಂತೆ ಬೆಂಗಳೂರಿಗೆ ತಂದು ತಕ್ಷಣವೇ ಕಸಿ ಮಾಡಲಾಗಿದೆ.   

ಮಂಗಳವಾರ ರಾತ್ರಿ ನಿಧನ ಹೊಂದಿದ್ದ 16 ವರ್ಷದ ಬೆಳಗಾವಿಯ ಬಾಲಕನ ಕುಟುಂಬ ಯಕೃತ್‌ ದಾನ ಮಾಡುವ ಅತ್ಯಂತ ಶ್ರೇಷ್ಠ ನಿರ್ಧಾರವನ್ನು ಕೈಗೊಂಡಿತ್ತು. ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದ ಬಾಲಕನ ದೇಹದಿಂದ ಯಕೃತ್‌ನ್ನು ಬೇರ್ಪಡಿಸಿ ತಕ್ಷಣ ಝೀರೋ ಟ್ರಾಫಿಕ್‌ ಮೂಲಕ ಒಂದು ಗಂಟೆಯೊಳಗೆ ಹುಬ್ಬಳ್ಳಿಗೆ ತಲುಪಿಸಲಾಯಿತು.

ಅಲ್ಲಿ ಸಿದ್ಧವಾಗಿ ನಿಂತಿದ್ದ ಇಂಡಿಗೋ ಏರ್‌ಲೈನ್ಸ್‌ ವಿಮಾನ ಮೂಲಕ ಪ್ರಯಾಣಿಕರ ಆಸನದಲ್ಲೇ ಬಾಲಕನ ಯಕೃತ್‌ನ ಶೀತಲೀಕೃತ ಬಾಕ್ಸ್‌ ಇರಿಸಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಬೆ.9.35ಕ್ಕೆ ವಿಮಾನ ಭೂ ಸ್ಪರ್ಶ ಮಾಡುತ್ತಿದ್ದಂತೆ ಧಾವಿಸಿ ಬಂದ ಆಂಬುಲೆನ್ಸ್‌ ಮತ್ತು ವೈದ್ಯಕೀಯ ತಂಡ ಯಕೃತ್‌ನ್ನು ಯಶವಂತಪುರದ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ ಮೂಲಕ ತಲುಪಿಸಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button