ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಮಂಗಳವಾರ ರಾತ್ರಿಯಿಂದಲೇ ಜನತಾ ಕರ್ಫ್ಯೂ ಜಾರಿಗೆ ಸರಕಾರ ನಿರ್ಧರಿಸಿದೆ. ಮೊದಲ ಹಂತದಲ್ಲಿ 15 ದಿನಗಳ ಕಾಲ ಜನತಾ ಕರ್ಫ್ಯೂ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಮಂಗಳವಾರ ರಾತ್ರಿಯಿಂದ ಮೇ 10ರ ವರೆಗೆ ಜನತಾ ಕರ್ಫ್ಯೂ ಜಾರಿಗೊಳಿಸಲು ಸರಕಾರ ನಿರ್ಧರಿಸಿದೆ. ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು.
ಅಗತ್ಯ ಸೇವೆಗಳನ್ನು ಹೊರತುಪಡಿಸಿ 15 ದಿನ ಎಲ್ಲವೂ ಬಂದ್ ಆಗಲಿದೆ. ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತು ಖರೀದಿ ಮಾಡಬಹುದು. ನಂತರ ಯಾವುದಕ್ಕೂ ಅವಕಾಶವಿಲ್ಲ. ಬಸ್ ಸಂಚಾರ ಬಂದ್ ಆಗಲಿದೆ.
ರಾಜ್ಯದ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕುರಿತು ಎಲ್ಲ ಸಚಿವರೂ ಕಳವಳ ವ್ಯಕ್ತಪಡಿಸಿದರು. ಇಂದಿನ ಪರಿಸ್ಥಿತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಅನಿವಾರ್ಯ ಎನ್ನುವ ಅಭಿಪ್ರಾಯ ಎಲ್ಲರಿಂದ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ.
ರಾಜ್ಯದ ಕೊರೋನಾ ಪರಿಸ್ಥಿತಿ ಕುರಿತು ಸುಮಾರು ಎರಡೂವರೆ ಗಂಟೆಗಳ ಕಾಲ ಸಚಿವಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಎಲ್ಲ ಸಚಿವರೂ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ 2 ವಾರ ಜನತಾ ಕರ್ಫ್ಯೂ ಜಾರಿಗೆ ನಿರ್ಧರಿಸಲಾಯಿತು. 2 ವಾರದಲ್ಲಿ ನಿಯಂತ್ರಣಕ್ಕೆ ಬರದಿದ್ದಲ್ಲಿ ಮತ್ತಷ್ಟು ಕಠಿಣ ಕ್ರಮ ಅನಿವಾರ್ಯ ಎಂದು ಸಿಎಂ ಎಚ್ಚರಿಸಿದರು.
18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ವ್ಯಾಕ್ಸಿನೇಶನ್ ಮಾಡಲು ಸಚಿವಸಂಪುಟ ನಿರ್ಧರಿಸಿದೆ.
ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸೇರಿದಂತೆ ಎಲ್ಲ ಚುನಾವಣೆಗಳನ್ನು ಮುಂದೂಡುವಂತೆ ಶಿಫಾರಸ್ಸು ಮಾಡಲು ನಿರ್ಧರಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಇನ್ನು ಕೆಲವೇ ಹೊತ್ತಿನಲ್ಲಿ ವಿವರ ಆದೇಶ ಹೊರಬೀಳಲಿದೆ.
ರಾಜ್ಯದಲ್ಲಿ ಎಲ್ಲಾ ಚುನಾವಣೆಗಳನ್ನೂ ಮುಂದೂಡಲು ಶಿಫಾರಸ್ಸು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ