ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾಳೆಯಿಂದ ಕೆಎಸ್‍ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರ ಆರಂಭವಾಗಲಿದೆ. ಸಾರಿಗೆ ವಾಹನಗಳು ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಸಂಚಾರ ನಡೆಸಲಿವೆ. ರೈಲು ಪ್ರಯಾಣ ಸಹ ರಾಜ್ಯದ ಒಳಗಡೆ ಓಡಾಟ ನಡೆಸಲಿವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನಾಲ್ಕನೇ ಹಂತದ ಲಾಕ್ ಡೌನ್ ಮಾರ್ಗಸೂಚಿ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ನಾಳೆಯಿಂದ ಬಸ್ ಸಂಚಾರ ಆರಂಭವಾಗಲಿದ್ದು, 30 ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ತುರ್ತು ಸಂದರ್ಭ ಹೊರತುಪಡಿಸಿ ಅಂತರ್ ರಾಜ್ಯ ಸಂಚಾರ ಇರುವುದಿಲ್ಲ. ಈ ಕುರಿತು ಮೇ 31ರ ಬಳಿಕ ನಿರ್ಧರಿಸಲಾಗುವುದು ಎಂದರು.
ಮದುವೆಗಳಲ್ಲಿ 50 ಜನಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ. ಆಟೋ, ಕ್ಯಾಬ್‍ಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಆಟೋ, ಟ್ಯಾಕ್ಸಿಗಳಲ್ಲಿ ಚಾಲಕ ಹೊರತು ಪಡಿಸಿ ಇಬ್ಬರು ಪ್ರಯಾಣ ಮಾಡಬಹುದು. ಮ್ಯಾಕ್ಸಿಕ್ಯಾಬ್ ನಲ್ಲಿ ಚಾಲಕ ಹೊರತು ಪಡಿಸಿ ಮೂವರು ಪ್ರಯಾಣ ಮಾಡಬಹುದು. ಸಂಜೆ 7 ರಿಂದ ಬೆಳಿಗ್ಗೆ 7 ಗಂಟೆ ವರೆಗೆ ಕರ್ಫ್ಯೂ ಮುಂದುವರಿಯಲಿದೆ. ಪ್ರತಿ ಭಾನುವಾರ ಕಂಪ್ಲೀಟ್ ಲಾಕ್‍ಡೌನ್ ಇರಲಿದ್ದು, ಜನರು ಮನೆಯಿಂದ ಹೊರ ಬರುವಂತಿಲ್ಲ. ಹೊರ ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಮ್ ಗಳನ್ನು ತೆರೆಯುವಂತಿಲ್ಲ. ಕ್ರೀಡಾಂಗಣ ತೆರಯಲಾಗುವುದು ಆದರೆ ಗುಂಪು ಗುಂಪಾಗಿ ಸೇರುವಂತಿಲ್ಲ. ಪಾನಿಪುರಿ, ಫಾಸ್ಟ್ ಫುಡ್ ಸೇರಿದಂತೆ ಬೀದಿ ಬದಿ ವ್ಯಾಪಾರ ನಡೆಸಬಹುದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ